ಆಳಂದ: ಅತಿವೃಷ್ಟಿಯಿAದ ಮುಂಗಾರು ಬೆಳೆಗಳಾದ ಹೆಸರು, ಉದ್ದು, ತೊಗರಿ, ಸೋಯಾಬೀನ್ ಹಾಳಾಗಿದ್ದು, ಕೂಡಲೇ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಮಾಜಿ ಶಾಸಕ ಸುಭಾಷ ಗುತ್ತೇದಾರ್ ಒತ್ತಾಯಿಸಿದರು.
ಕೇಂದ್ರ ಸರ್ಕಾರ ಉದ್ದು, ಹೆಸರು ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿದೆ. ಆದರೆ ರಾಜ್ಯ ಸರ್ಕಾರ ಇಲ್ಲಿವರೆಗೂ ಖರೀದಿ ಕೇಂದ್ರಗಳನ್ನು ತೆಗೆದಿಲ್ಲ. ಮಾರುಕಟ್ಟೆಯಲ್ಲಿ ರೈತರ ಬೆಳೆಗಳಿಗೆ ಸಮರ್ಪಕ ದರ ದೊರೆಯುತ್ತಿಲ್ಲ. ಇದರಿಂದ ರೈತಾಪಿ ವರ್ಗ ಸಮಸ್ಯೆ ಅನುಭವಿಸುವಂತಾಗಿದೆ. ಕೂಡಲೇ ಖರೀದಿ ಕೇಂದ್ರಗಳನ್ನು ಆರಂಭಿಸಿ, ಪ್ರತಿ ರೈತರಿಂದ ಯಾವುದೇ ನಿರ್ಬಂಧವಿಲ್ಲದೆ ಉದ್ದು, ಹೆಸರು ಖರೀದಿ ಮಾಡಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಆಳಂದ ಕ್ಷೇತ್ರಕ್ಕೆ ಶೂನ್ಯ ಕೊಡುಗೆ ನೀಡಲಾಗಿದೆ. ಸಿಎಂ ಸಲಹೆಗಾರ ಬಿ.ಆರ್.ಪಾಟೀಲ್ ಅವರು ವಿಶೇಷ ಯೋಜನೆ ತರುವಲ್ಲಿ ವಿಫಲವಾಗಿದ್ದಾರೆ. ತಾಲೂಕಿನ ಮಹತ್ವದ ಕೆರೆ ತುಂಬಿಸುವ ಯೋಜನೆಗೂ ಅನುಮೋದನೆ ಸಿಕ್ಕಿಲ್ಲ. ಅಲ್ಲದೆ ತಾಲೂಕಿನ ಯಾವ ಯೋಜನೆಗಳೂ ಸಚಿವ ಸಂಪುಟದಲ್ಲಿ ಚರ್ಚೆಯಾಗಿಲ್ಲ ಎಂದು ದೂರಿದರು.
ಕ್ಯಾಬಿನೆಟ್‌ನಲ್ಲಿ ಘೋಷಣೆಯಾಗಿ ಯೋಜನೆಗಳಿಗೆ ಕೆಕೆಆರ್‌ಡಿಬಿ ಅನುದಾನವನ್ನೇ ನೀಡಲಾಗಿದೆ. ಇದರಲ್ಲಿ ವಿಶೇಷತೆ ಏನು ಇಲ್ಲ. ಶಾಸಕ ಬಿ.ಆರ್.ಪಾಟೀಲ್ ಅವರ ಹೇಳಿಕೆಗೆ ಸ್ವಪಕ್ಷದವರೇ ಖಂಡನೆ ವ್ಯಕ್ತಪಡಿಸುತ್ತಿದ್ದಾರೆ. ಸಂಪುಟಕ್ಕೂ ಮುನ್ನ ಸಭೆ ನಡೆಸಬೇಕಾದ ಶಾಸಕರು, ಸಭೆ ಬಳಿಕ ಪತ್ರಿಕಾಗೋಷ್ಠಿ ಮಾಡಿ ಏನೇನೋ ಮಾತನಾಡಿದ್ದಾರೆ. ನನ್ನ ಅವಧಿಯಲ್ಲಿ ಮಂಜೂರಾದ ಕಾಮಗಾರಿಗಳಿಗೆ ಬೇರೆ ಹೆಸರು ಕೊಟ್ಟು ಶಂಕುಸ್ಥಾಪನೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಸುದ್ದಿ ಗೋಷ್ಟಿಯಲ್ಲಿ ಪಕ್ಷದ ಮುಖಂಡರಾದ ಮಲ್ಲಣ್ಣಾ ನಾಗೂರೆ, ಶರಣಬಸಪ್ಪ ಸಂಜವಾಡ ಉಪಸ್ಥಿತರಿದ್ದರು.