ಪಾಂಡವಪುರ: ಕ್ಷೇತ್ರದ ಶಾಸಕನಾಗಿ 77ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಬೇಕಿತ್ತು. ಆದರೆ, ಕೆಲ ತಾಂತ್ರಿಕ ಕಾರಣಗಳಿಂದ ವಿದೇಶದಿಂದ ಹಿಂದಿರುಗಲು ಸಾಧ್ಯವಾಗದಿರುವುದಕ್ಕೆ ಕ್ಷೇತ್ರದ ಮತದಾರರ ಕ್ಷಮೆಯಾಚಿಸುವುದಾಗಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ಶಾಸಕನಾಗಿ ಸ್ವತಂತ್ರೃ ದಿನಾಚರಣೆ ಸಂಬಂಧಿಸಿದಂತೆ ಎಲ್ಲ ಸಿದ್ಧತೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ತಯಾರಿ ಮಾಡಲಾಗಿತ್ತು. ಶಾಸಕನಾಗಿ ಸ್ವಾತಂತ್ರೊೃೀತ್ಸವದಂತಹ ದೊಡ್ಡ ಸಮಾರಂಭದಲ್ಲಿ ಹಾಜರಿರಬೇಕಿತ್ತು. ಈ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗದಿರುವುದಕ್ಕೆ ರೈತ ಸಂಘ ಕಾರ್ಯಕರ್ತರಾದಿಯಾಗಿ ಎಲ್ಲರ ಮನಸ್ಸಿಗೆ ನೋವುಂಟಾಗಿದೆ ಎಂಬುದು ನನಗೆ ತಿಳಿದಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶಾಸಕನಾಗಿ ಈಗ ಮೂರು ತಿಂಗಳು ಕಳೆದಿದೆ. ಈ ಅವಧಿಯಲ್ಲಿ ರೈತ ಸಂಘದ ಹಿರಿಯ ಮುಖಂಡರು, ತಂದೆಯ ಒಡನಾಟ ಇಟ್ಟುಕೊಂಡಿದ್ದವರಿಂದ ಸಾಕಷ್ಟು ವಿಚಾರಗಳನ್ನು ಕಲಿತಿದ್ದೇನೆ. ತಾಲೂಕು ಮಟ್ಟದ ಅಧಿಕಾರಿಗಳು ಹಿಡಿತದಲ್ಲಿ ಇಲ್ಲ ಎಂಬ ಆರೋಪಗಳು ಕೇಳಿ ಬರುತ್ತಿದೆ. ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳು ವಿಳಂಬವಾಗುತ್ತಿದೆ ಎಂಬು ದೂರುಗಳು ವ್ಯಕ್ತವಾಗುತ್ತಿದೆ. ಈ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಈ ಸಮಸ್ಯೆಗಳಿಗೆ ತಕ್ಷಣಕ್ಕೆ ಪರಿಹಾರ ಸಿಗುವುದು ಕಷ್ಟದ ಕೆಲಸ. ಈ ನಿಟ್ಟಿನಲ್ಲಿ ಶಾಶ್ವತ ಪರಿಹಾರ ಕಂಡು ಹಿಡಿಯಲು ಪ್ರಯತ್ನಿಸುತ್ತಿರುವುದಾಗಿ ನುಡಿದರು.
ಏಳು ದಿನ ಮಾತ್ರ ನೀರು ಸ್ಥಗಿತಗೊಳಿಸಬೇಕು : ಕೆಆರ್‌ಎಸ್ ಅಚ್ಚಕಟ್ಟು ನಾಲೆಗಳಿಗೆ ಕಟ್ಟು ಪದ್ಧತಿಯಡಿ ನೀರು ಹರಿಸಲಾಗುತ್ತಿದ್ದು, 15 ದಿನಗಳ ಕಾಲ ನೀರು ಹರಿಸಿ 15 ದಿನಗಳ ಕಾಲ ನೀರು ಸ್ಥಗಿತಗೊಳಿಸಲಾಗುತ್ತಿದೆ. ಈ ಪದ್ಧತಿಯಂತೆ ನೀರು ಹರಿಸಿದರೆ ರೈತರು ಬೆಳೆದಿರುವ ಭತ್ತಕ್ಕೆ ನೀರು ಸಾಲದೆ ಬೆಳೆ ಉಳಿಸಿಕೊಳ್ಳುವುದ ಕಷ್ಟವಾಗುತ್ತದೆ. ಹೀಗಾಗಿ ಕಟ್ಟು ಪದ್ಧತಿಯಡಿ ಒಂದು ವಾರ ಮಾತ್ರ ನೀರು ಸ್ಥಗಿತಗೊಳಿಸುವಂತೆ ಅಧಿಕಾರಿಗಳು ಹಾಗೂ ಸರ್ಕಾರದ ಗಮನಕ್ಕೆ ತಂದು ಹೋರಾಟ ಮಾಡಲಾಗುವುದು ಎಂದರು.
ಸಹಾಯವಾಣಿ ಪ್ರಾರಂಭ : ಸಾರ್ವಜನಿಕರ ಕೆಲಸ ಕಾರ್ಯಗಳು ಮತ್ತು ಕುಂದುಕೊರತೆಗಳ ನಿವಾರಣೆಗಾಗಿ ತಾಲೂಕು ಕಚೇರಿಯಲ್ಲಿ ಸಹಾಯವಾಣಿ ತೆರೆಯಲಾಗಿದೆ. ಇಲ್ಲಿ ಪ್ರತಿನಿತ್ಯ ನಾಲ್ಕರಿಂದ ಐವರು ಕೆಲಸ ಮಾಡಲಿದ್ದು, ಸಾರ್ವಜನಿಕರು ಸರ್ಕಾರಿ ಕಚೇರಿಗಳಿಂದ ಆಗಬೇಕಿರುವ ಕೆಲಸಗಳು ಸೇರಿದಂತೆ ಯಾವುದೇ ಸಮಸ್ಯೆ ಇದ್ದರೂ ದೂರವಾಣಿ ಮೂಲಕ ದೂರು ದಾಖಲಿಬಹುದು. ಇಲ್ಲಿಗೆ ಪ್ರತಿನಿತ್ಯ ಬರುವ ಕರೆಗಳನ್ನು ದಾಖಲಿಸಿಕೊಂಡು ಸಮಸ್ಯೆ ಪರಿಹಾರ ಮಾಡಲಾಗುವುದು. ಸಾರ್ವಜನಿಕರು ಸಹಾಯವಾಣಿ ಸಂಖ್ಯೆ 9606799499, 9606899499 ಕರೆ ಮಾಡಿ ಸಮಸ್ಯೆ ಹೇಳಿಕೊಳ್ಳಬಹುದು ಎಂದು ವಿವರಿಸಿದರು.
ರೈತಸಂಘ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ತಾಲೂಕು ಅಧ್ಯಕ್ಷ ಕೆನ್ನಾಳು ನಾಗರಾಜು, ಸರ್ವೋದಯ ಕರ್ನಾಟಕ ಪಕ್ಷದ ತಾಲೂಕು ಅಧ್ಯಕ್ಷ ಎಸ್.ದಯಾನಂದ್, ಮುಖಂಡರಾದ ಎಣ್ಣೆಹೊಳೆಕೊಪ್ಪಲು ವೈ.ಪಿ.ಮಂಜು, ರಾಘವೇಂದ್ರ ಇತರರು ಇದ್ದರು.