ಅರಸೀಕೆರೆ: ಜಿಲ್ಲೆಯಲ್ಲಿ ಕ್ಷೀರ ಕ್ರಾಂತಿಗೆ ಮುನ್ನುಡಿ ಬರೆದ ಕೀರ್ತಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರಿಗೆ ಸಲ್ಲುತ್ತದೆ ಎಂದು ಜೆಡಿಎಸ್ ಮುಖಂಡ ಬಾಣಾವರ ಅಶೋಕ್ ಹೇಳಿದರು.
ತಾಲೂಕಿನ ಕುರುವಂಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಿಂಗೋಡನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಹಾಲು ಉತ್ಪಾದಕರ ನೂತನ ಸಹಕಾರ ಸಂಘಕ್ಕೆ ಚಾಲನೆ ನೀಡಿ ಮಾತನಾಡಿದರು.
ಗ್ರಾಮೀಣ ಭಾಗದ ಅನ್ನದಾತರ ಬದುಕು ಹಸನುಗೊಳಿಸಬೇಕು ಎನ್ನುವ ಉದ್ದೇಶದಿಂದ ಎಚ್.ಡಿ.ರೇವಣ್ಣ ಹೈನುಗಾರಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಿದ್ದಾರೆ. ಹಾಸನ, ಚನ್ನರಾಯಪಟ್ಟಣ ಸೇರಿ ತಾಲೂಕಿನ ಗೀಜಿಹಳ್ಳಿ ಬಳಿ ಬೃಹತ್ ಹಾಲು ಸಂಸ್ಕರಣಾ ಘಟಕ ಸ್ಥಾಪಿಸಿದ್ದಾರೆ. ದುಡಿಯುವ ಕೈಗಳಿಗೆ ಉದ್ಯೋಗ ನೀಡುವ ಜತೆಗೆ ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ಹಸುಕೊಳ್ಳಲು ಆರ್ಥಿಕ ನೆರವು ನೀಡುವ ಯೋಜನೆಯನ್ನೂ ಜಾರಿಗೊಳಿಸಿದ್ದು ಕ್ಷೀರ ಕ್ರಾಂತಿಗೆ ಮುನ್ನುಡಿ ಬರೆದಿದ್ದಾರೆ ಎಂದು ಬಣ್ಣಿಸಿದರು.
ವ್ಯವಸ್ಥಾಪಕ ಗಫರ್, ಕೆ.ಎಸ್. ಚಂದ್ರಶೇಖರ್, ಮುಖಂಡರಾದ ಬಿ.ಜಿ. ನಿರಂಜನ್, ಗ್ರಾಪಂ ಸದಸ್ಯ ವಿಶ್ವನಾಥ್ ಇತರರು ಹಾಜರಿದ್ದರು.