ಜಿಲ್ಲೆ

ಕ್ಷಿಪ್ರ ಬೆಳವಣಿಗೆ: ಸಾಗರ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರ ಪದತ್ಯಾಗ

ಸಾಗರ: ಅವಿಶ್ವಾಸ ಗೊತ್ತುವಳಿ ಮೂಲಕ ಸಾಗರ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಎಂ.ಕೆ. ದ್ಯಾವಪ್ಪ ಅವರು ಪದಚ್ಯುತಗೊಳಿಸುವ ಪ್ರಕ್ರಿಯೆ ಚುರುಕಾಗುತ್ತಿದ್ದಂತೆ ದ್ಯಾವಪ್ಪ ಅವರೇ ರಾಜೀನಾಮೆ ನೀಡಿದ್ದಾರೆ.

9 ನಿರ್ದೇಶಕರು ನೀಡಿರುವ ನೋಟಿಸ್ ಆಧರಿಸಿ ಡಿ.12ಕ್ಕೆ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಸಭೆ ಕರೆಯಲಾಗಿತ್ತು. ಇದೀಗ ಅಧ್ಯಕ್ಷರು ರಾಜೀನಾಮೆ ನೀಡಿರುವುದರಿಂದ ನಿರ್ದೇಶಕರು ಅವಿಸ್ವಾಸ ಗೊತ್ತುವಳಿ ಮಂಡನೆಯಿಂದ ಹಿಂದೆ ಸರಿಯುವರೋ ಅಥವಾ ಪೂರ್ವ ನಿಗದಿಯಂತೆ ಮಂಡನೆ ಮಾಡುವರೋ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಈ ಹಿಂದೆ ಇಂಥ ಪ್ರಕರಣಗಳಲ್ಲಿ ಅಧ್ಯಕ್ಷರು ರಾಜೀನಾಮೆ ಸಲ್ಲಿಸಿದ್ದರೂ ಪೂರ್ವನಿಗದಿಯಂತೆ ಅವಿಶ್ವಾಸ ಗೊತ್ತುವಳಿ ಮಂಡನೆ ಮಾಡಿದ ನಿದರ್ಶನಗಳಿವೆ.

ಸುದ್ದಿಗೋಷ್ಠಿಯಲ್ಲಿ ರಾಜೀನಾಮೆ ನಿರ್ಧಾರ ಪ್ರಕಟಿಸಿದ ದ್ಯಾವಪ್ಪ, ಹಿಂದುಳಿದ ಸಮುದಾಯದ ನನ್ನ ಏಳಿಗೆ ಸಹಿಸದೆ ಪಟ್ಟಭದ್ರ ಹಿತಾಸಕ್ತಿಗಳು ಷಡ್ಯಂತ್ರ ಮಾಡಿವೆ. ಆಂತರಿಕ ಸಂಘರ್ಷದಲ್ಲಿ ರೈತರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.

9 ಜನ ನಿರ್ದೇಶಕರು ಸಹಿ ಮಾಡಿ ಅವಿಶ್ವಾಸ ಗೊತ್ತುವಳಿ ಮಂಡನೆಗೆ ನೋಟಿಸ್ ನೀಡಿದ್ದಾರೆ. ಡಿ.12 ರಂದು ಸಭೆ ನಿದಿಯಾಗಿದೆ. ನನಗೆ ಅಧಿಕಾರಕ್ಕಿಂತ ರೈತರ ಹಿತಾಸಕ್ತಿ ಮುಖ್ಯ. ಹಾಗಾಗಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಹೇಳಿದರು.

ಈ ತಿಂಗಳ ಅಂತ್ಯದೊಳಗೆ ರೈತರಿಗೆ ರಿಯಾಯಿತಿ ಬಡ್ಡಿ ದರದ ಸಾಲ ವಿತರಣೆಯಾಗಬೇಕು. ರೈತರು ನಾಲ್ಕೈದು ಸಾವಿರ ರೂ. ವೆಚ್ಚ ಮಾಡಿ ಅಗತ್ಯ ದಾಖಲೆಗಳನ್ನು ಹೊಂದಿಸಿಕೊಂಡಿದ್ದಾರೆ. ನಾನು ಎಂದಿಗೂ ಅಧಿಕಾರಕ್ಕೆ ಅಂಟಿಕೊಂಡವನಲ್ಲ. ಅಂತಹ ವ್ಯಾಮೋಹವೂ ನನಗಿಲ್ಲ. ನಮ್ಮ ಬ್ಯಾಂಕಿನ ಬೆಳವಣಿಗೆಗಳು ಬೇಸರ ತಂದ ಕಾರಣ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದರು.

ಷಡ್ಯಂತ್ರಕ್ಕೆ ಸುಬ್ಬರಾವ್ ಕಾರಣ: ನಿರ್ದೇಶಕ ಪಿ.ಎನ್.ಸುಬ್ಬರಾವ್ ಅವರೇ ನನ್ನ ಪದಚ್ಯುತಿಗೆ ರೂಪಿತವಾದ ಷಡ್ಯಂತ್ರದ ಸೂತ್ರಧಾರ ಎಂದು ಆರೋಪ ಮಾಡಿದ ದ್ಯಾವಪ್ಪ, ನಾನು ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಸಂಸ್ಥೆ ನಷ್ಟದಲ್ಲಿತ್ತು. ಈಗ 1.5 ಕೋಟಿ ರೂ. ಲಾಭದಲ್ಲಿದೆ ಎಂದು ಹೇಳಿದರು. ಪ್ರತಿಶತ 3ರ ಬಡ್ಡಿದರದಲ್ಲಿ ಕೃಷಿ ಸಾಲ ವಿತರಣೆಗೆ ಸರ್ಕಾರ 1.5 ಕೋಟಿ ರೂ ಬಿಡುಗಡೆ ಮಾಡಿದ್ದು ಈ ಸಾಲ ವಿತರಣೆಗೆ ಬ್ಯಾಂಕಿನಿಂದ ನಿಯೋಜಿಸಲ್ಪಟ್ಟ ವ್ಯವಸ್ಥಾಪಕರು ನಮ್ಮ ಬ್ಯಾಂಕಿನಲ್ಲಿ ಇರಬೇಕು ಎಂದು ಸೂಚಿಸಿದೆ. ನಮ್ಮ ಬ್ಯಾಂಕ್‌ನಲ್ಲಿ ಅವರು ಸೂಚಿಸಿರುವ ನಿಯೋಜಕರು ಇಲ್ಲದೇ ಇರುವ ಹಿನ್ನೆಲೆಯಲ್ಲಿ ರಾಜ್ಯದ ಅನುಮತಿ ಪಡೆದು ವ್ಯವಸ್ಥಾಪಕರನ್ನು ನಿಯೋಜಿಸಿ ಕೊಂಡಿರುವುದೇ ಕೆಲವು ನಿರ್ದೇಶಕರ ಕೆಂಗಣ್ಣಿಗೆ ಕಾರಣ ಎಂದು ಹೇಳಿದರು. ಎಲ್ಲರ ಗಮನಕ್ಕೆ ತಂದ ನಂತರವೇ ರೈತರ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿತ್ತು. ಸುಬ್ಬರಾವ್ ಅಧಿಕಾರದಲ್ಲಿದ್ದಾಗ ಬ್ಯಾಂಕಿಗೆ ಬಂದ ರೈತರಿಗೆ ಅನುಕೂಲವಾಗುವ ಅನುದಾನ ವಾಪಸ್ ಕಳುಹಿಸಿದ್ದಾರೆ. ರೈತರ ಸವಲತ್ತುಗಳನ್ನು ಸರ್ಕಾರಕ್ಕೆ ಮರಳಿಸಿದ್ದು ಏಕೆ ಎಂಬುದನ್ನು ಅವರು ಸ್ಪಷ್ಟಪಡಿಸಬೇಕು ಎಂದು ಆಗ್ರಹಪಡಿಸಿದರು.