ಹುಬ್ಬಳ್ಳಿ : ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನೇತೃತ್ವದ ಕ್ಷಮತಾ ಸೇವಾ ಸಂಸ್ಥೆ ವತಿಯಿಂದ ಮಹಾಶಿವರಾತ್ರಿ ಅಂಗವಾಗಿ ಫೆ. 18ರಂದು ಶಿವನಾಮ ಸ್ಮರಣೆ, ಭಕ್ತಿ ಸಂಗೀತ ಸಂಜೆ ಹಾಗೂ ಪವಿತ್ರ ಕೇದಾರನಾಥ ದಿವ್ಯ ದರ್ಶನ ಕಾರ್ಯಕ್ರಮಗಳನ್ನು ಇಲ್ಲಿನ ದೇಶಪಾಂಡೆ ನಗರದ ಜಿಮಖಾನಾ ಮೈದಾನದಲ್ಲಿ ಆಯೋಜಿಸಲಾಗಿದೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಕ್ಷಮತಾ ಸೇವಾ ಸಂಸ್ಥೆಯ ಗೋವಿಂದ ಜೋಶಿ, ಮುಂಡಗೋಡದ ಶ್ರೀ ರುದ್ರಮುನಿ ಸ್ವಾಮೀಜಿ ನೇತೃತ್ವದಲ್ಲಿ ಮಹಾಶಿವನ ಪೂಜಾ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಫೆ. 18 ರಂದು ಇಡೀ ದಿನ ಜಿಮಖಾನಾ ಮೈದಾನದಲ್ಲಿ ಧಾರ್ವಿುಕ ಕಾರ್ಯಕ್ರಮಗಳು ನಡೆಯಲಿವೆ. ಉತ್ತರಖಂಡದಲ್ಲಿರುವ ಮಹಾದೇವ ಪ್ರಭು ಕೇದಾರನಾಥ ದೇವಸ್ಥಾನದ ಮಾದರಿಯನ್ನು ಮೈದಾನದಲ್ಲಿ ನಿರ್ವಿುಸಲಾಗುವುದು. ಅಂದು ಬೆಳಗ್ಗೆ ಮಹಾಶಿವನಿಗೆ ವಿಶೇಷ ಪೂಜೆ ನಡೆಯಲಿದೆ. ಫಲಾಹಾರ ಮತ್ತು ಪ್ರಸಾದ ವಿತರಣೆ ಜರುಗಲಿದೆ. ನೇಪಾಳದಿಂದ ತರಿಸಿರುವ ಪಂಚಮುಖಿ ರುದ್ರಾಕ್ಷಿಗಳನ್ನು ಭಕ್ತರಿಗೆ ಉಚಿತವಾಗಿ ವಿತರಿಸಲಾಗುವುದು ಎಂದು ತಿಳಿಸಿದರು.
ಸಂಜೆ 6.30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಾಜಿ ಮುಖ್ಯಮಂತ್ರಿ, ಶಾಸಕ ಜಗದೀಶ ಶೆಟ್ಟರ್, ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಶಾಸಕರಾದ ಅರವಿಂದ ಬೆಲ್ಲದ, ಸಿ.ಎಂ. ನಿಂಬಣ್ಣವರ, ಅಮೃತ ದೇಸಾಯಿ, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಮೇಯರ್ ಈರೇಶ ಅಂಚಟಗೇರಿ ಹಾಗೂ ಇತರರು ಪಾಲ್ಗೊಳ್ಳುವರು ಎಂದು ಹೇಳಿದರು.
ಹಿನ್ನೆಲೆಗಾಯಕರಾದ ಅನನ್ಯಭಟ್ಟ ಹಾಗೂ ನವೀನ ಸಜ್ಜು ಅವರಿಂದ ಇದೇ ಸಂದರ್ಭದಲ್ಲಿ ಸಂಗೀತ ಸಂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನೃತ್ಯ ಸಂಯೋಜಕರಾದ ಶುಭಂಕರ ಮತ್ತು ಅನಿಲ ನೇತೃತ್ವದ ವಿ ಡೈರೆಕ್ಟ್ ನೃತ್ಯ ತಂಡದಿಂದ ಶಿವ ತಾಂಡವ ನೃತ್ಯ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಗೋವಿಂದ ಜೋಶಿ, ತೋಷ ಚವ್ಹಾಣ, ಪ್ರಭು ನವಲಗುಂದಮಠ, ಮುರಳೀಧರ ಮಳಗಿ, ಮಲ್ಲಿಕಾರ್ಜುನ ಪಾಟೀಲ ಅವರು ಮಹಾಶಿವರಾತ್ರಿ ಹಾಗೂ ಕೇದಾರನಾಥ ದಿವ್ಯ ದರ್ಶನದ ಪೋಸ್ಟರ್ ಬಿಡುಗಡೆಗೊಳಿಸಿದರು.