ನರಗುಂದ: ನವಿಲು ತೀರ್ಥ ಜಲಾಶಯದಿಂದ ಮಲಪ್ರಭಾ ನದಿಗೆ 25 ಸಾವಿರ ಕ್ಯೂಸೆಕ್ ನೀರು ಹರಿಬಿಟ್ಟಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಸೋಮವಾರ ತಾಲೂಕಿನ ಲಖಮಾಪೂರ ಗ್ರಾಮಕ್ಕೆ ಭೇಟಿ ನೀಡಿ ವಿವಿಧ ಮುಂಜಾಗ್ರತಾ ಕ್ರಮಗಳ ಕುರಿತು ಪರಿಶೀಲಿಸಿದರು.
ರಾಮದುರ್ಗ ರಸ್ತೆ ಪಕ್ಕದಲ್ಲಿ ನಿರ್ವಿುಸಲಾಗುತ್ತಿರುವ ತಗಡಿನ ಶೆಡ್ಗಳನ್ನು ಪರಿಶೀಲಿಸಿದ ಅವರು, ಉಕ್ಕಿ ಹರಿಯುತ್ತಿರುವ ಮಲಪ್ರಭಾ ನದಿಗೆ ಯಾವುದೇ ಕ್ಷಣದಲ್ಲಾದರೂ ಹೆಚ್ಚಿನ ನೀರು ಬರುವ ಸಾಧ್ಯತೆ ಇದೆ. ಆದ್ದರಿಂದ ಬೆಳ್ಳೇರಿಯ ಕೃಷಿ ಡಿಪ್ಲೊಮಾ ಕಾಲೇಜಿನ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಗೊಳ್ಳುವಂತೆ ಮನವಿ ಮಾಡಿದರು.
ಇದಕ್ಕೆ ವಿರೋಧಿಸಿದ ಗ್ರಾಮಸ್ಥರು, ‘ನಾವು ಯಾವುದೇ ಕಾರಣಕ್ಕೂ ನಮ್ಮ ಊರು ಬಿಟ್ಟು ಕಾಳಜಿ ಕೇಂದ್ರಕ್ಕೆ’ ಬರುವುದಿಲ್ಲ. ಬದಲಿಗೆ ರಾಮದುರ್ಗ ಸರ ಹದ್ದಿನ ಜಮೀನೊಂದರಲ್ಲಿ ನಮಗೆ ಶಾಶ್ವತ ಪರಿಹಾರ ಕಲ್ಪಿಸಿಕೊಡಬೇಕು. ಪದೇ ಪದೆ ಪ್ರವಾಹಕ್ಕೆ ತುತ್ತಾಗುತ್ತಿರುವುದರಿಂದ ನಮಗೆ ಸಾಕಷ್ಟು ಹಾನಿಯಾಗುತ್ತಿದೆ. ಇದರಿಂದ ಮುಕ್ತಿ ದೊರಕಿಸಿಕೊಡಿ’ ಎಂದು ಒಕ್ಕೊರಲಿನಿಂದ ಆಗ್ರಹಿಸಿದರು.
ಜಿಲ್ಲಾಧಿಕಾರಿ ಸುಂದರೇಶ ಬಾಬು ಹಾಗೂ ಎಸ್ಪಿ ಎನ್. ಯತೀಶ ಮಾತನಾಡಿ, ರಾಮದುರ್ಗ ತಾಲೂಕು ಬೇರೆ ಜಿಲ್ಲೆಯ ವ್ಯಾಪ್ತಿಗೆ ಬರುತ್ತದೆ. ಆದ್ದರಿಂದ ಇದು ತಕ್ಷಣಕ್ಕೆ ಆಗುವ ಕೆಲಸವಲ್ಲ. ಸದ್ಯಕ್ಕೆ ನಿರಂತರ ಮಳೆ ಹಾಗೂ ಪ್ರವಾಹದಿಂದ ರಕ್ಷಿಸಿಕೊಳ್ಳಲು ಬೆಳ್ಳೇರಿಯ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಗೊಳ್ಳಿ. ಬೇಕಾದ್ರೆ ತಾತ್ಕಾಲಿಕವಾಗಿ ನಿರ್ವಿುಸುತ್ತಿರುವ ತಗಡಿನ ಶೆಡ್ಗಳಲ್ಲಿ ನಿಮ್ಮ ಜಾನುವಾರು ಮತ್ತು ಕೃಷಿ ಚಟುವಟಿಕೆಗೆ ಬೇಕಾಗಿರುವ ಅಗತ್ಯ ಸಾಮಗ್ರಿಗಳನ್ನು ಇಟ್ಟುಕೊಳ್ಳಿ. ಇಲ್ಲದಿದ್ದರೆ ಮಹಿಳೆಯರು, ಮಕ್ಕಳು, ವಯೋವೃದ್ಧರಿಗೆ ಶೌಚಗೃಹ ಸೇರಿದಂತೆ ವಿವಿಧ ಮೂಲ ಸೌಕರ್ಯಗಳನ್ನು ಕಲ್ಪಿಸಲು ಅಧಿಕಾರಿಗಳಿಗೆ ಕಷ್ಟವಾಗುತ್ತದೆ ಎಂದರು.
ಅಂತಿಮವಾಗಿ ಎಲ್ಲ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಮನವೊಲಿಸಿದ್ದರಿಂದ ಕೆಲವರು ಕಾಳಜಿ ಕೇಂದ್ರಕ್ಕೆ ಬರಲು ಸಮ್ಮತಿಸಿದರು.
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನದಿಯಲ್ಲಿಯೇ ಲಖಮಾಪೂರ ಗ್ರಾಮದ 5 ಜನರು ಮಲಪ್ರಭಾ ನದಿ ದಾಟುವ ದುಸ್ಸಾಸಕ್ಕೆ ಮುಂದಾದರು. ತಮ್ಮ ಜೀವದ ಹಂಗು ತೊರೆದು ನದಿ ದಾಟುತ್ತಿರುವ ದೃಶ್ಯವನ್ನು ಕಂಡ ಪೊಲೀಸರು ನದಿ ದಾಟಿ ಬರದಂತೆ ಅದೆಷ್ಟೇ ಮನವಿ ಮಾಡಿಕೊಂಡರೂ ಕೇಳಲಿಲ್ಲ. ಒಬ್ಬರಿಗೊಬ್ಬರು ಕೈಕೈ ಹಿಡಿದುಕೊಂಡು ದಡ ಸೇರಿದರು. ಇದರಿಂದ ವಿಪರೀತ ಸಿಡಿಮಿಡಿಗೊಂಡ ಪೊಲೀಸರು ‘ಇಷ್ಟೊಂದು ನೀರಿನಲ್ಲಿ ದಾಟಿ ಬರುವ ಅಗತ್ಯವೇನಿತ್ತು. ನಿನ್ನೆಯೇ ಗ್ರಾಮ ತೊರೆಯುವಂತೆ ಸೂಚಿಸಿದ್ದರೂ ಇನ್ನೂ ಏಕೆ ಅಲ್ಲೇ ಇದ್ದಿರಿ’ ಎಂದು ತರಾಟೆಗೆ ತೆಗೆದುಕೊಂಡರು.
‘ತಮ್ಮನ ಹೆಂಡತಿ ಅನಾರೋಗ್ಯದಿಂದ ತೀರಿಕೊಂಡಿದ್ದಾಳೆ. ಹೀಗಾಗಿ ಮೃತರ ಅಂತ್ಯಕ್ರಿಯೆಗೆ ತೆರಳುತ್ತಿದ್ದೇವೆ’ ಎಂದು ಗ್ರಾಮದ ವೆಂಕಮ್ಮ ವೆಂಕನಗೌಡ್ರ ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಸತೀಶಕುಮಾರ, ಉಪ ವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ತಹಸೀಲ್ದಾರ್ ಎ.ಎಚ್. ಮಹೇಂದ್ರ, ಜಿ.ಪಂ. ಅಧ್ಯಕ್ಷ ರಾಜುಗೌಡ ಕೆಂಚನಗೌಡ್ರ, ತಾ.ಪಂ. ಇಒ ಸಿ.ಆರ್. ಕುರ್ತಕೋಟಿ, ಡಿವೈಎಸ್ಪಿ ಶಿವಾನಂದ ಕಟಗಿ, ನರಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ ಯಾವಗಲ್ಲ, ಬಾಬು ಹಿರೇಹೊಳಿ, ಉದಯಗೌಡ ವೀರನಗೌಡ್ರ, ಪಿಡಿಒ, ಗ್ರಾಮ ಲೆಕ್ಕಾಧಿಕಾರಿಗಳು ಉಪಸ್ಥಿತರಿದ್ದರು.
ವಾಸನ ಗ್ರಾಮಕ್ಕೂ ಪ್ರವಾಹ ಭೀತಿ: ಮಲಪ್ರಭಾ ನದಿಗೆ ಸೋಮವಾರ ಸಂಜೆ ಭಾರಿ ಪ್ರಮಾಣದ ನೀರು ಹರಿದು ಬಂತು. ಇದರಿಂದ ತಾಲೂಕಿನ ಕೊಣ್ಣೂರ ಗ್ರಾಮದ ಖಾಜಿ ಹಾಗೂ ಎಸ್ಸಿ ಕಾಲನಿಗೆ ನೀರು ನುಗ್ಗುತ್ತಿದೆ. ವಾಸನ ಗ್ರಾಮಕ್ಕೂ ನೀರು ನುಗ್ಗುವ ಸಂಭವವಿದೆ. ರೈತರ ಜಮೀನುಗಳಲ್ಲಿ ಬೆಳೆದಿದ್ದ ವಿವಿಧ ತೋಟಗಾರಿಕೆ ಮತ್ತು ವಾಣಿಜ್ಯ ಬೆಳೆಗಳಲ್ಲಿ ಅಪಾರ ಪ್ರಮಾಣದ ನೀರು ನಿಂತಿದ್ದು, ಆರ್ಥಿಕ ಸಂಕಷ್ಟ ತಲೆದೋರುವ ಆತಂಕ ರೈತರನ್ನು ಚಿಂತೆಗೀಡುಮಾಡಿದೆ.