ಜಿಲ್ಲೆ

ಕ್ವಿಂಟಾಲ್​ ಕೊಬ್ಬರಿಗೆ 20900 ರೂಪಾಯಿ!

ತೆಂಗು ಬೆಳೆಗಾರರಲ್ಲಿ ಹರ್ಷ, ಇತಿಹಾಸದಲ್ಲಿಯೇ ಇದು ದಾಖಲೆಯ ದರ

ತುಮಕೂರು: ತಿಪಟೂರು ಮಾರುಕಟ್ಟೆಯಲ್ಲಿ ಸೋಮವಾರ ಕೊಬ್ಬರಿಗೆ ದಾಖಲೆಯ ಬೆಲೆ ದಾಖಲಾಗಿದ್ದು, ತೆಂಗು ಬೆಳಗಾರರಿಗೆ ಸಂತಸದ ಜತೆಗೆ ಆಶ್ಚರ್ಯ ಕೂಡ ಮೂಡಿಸಿದೆ. ಕೊಬ್ಬರಿಯ ಇತಿಹಾಸದಲ್ಲಿಯೇ ಹಿಂದೆಂದೂ ದಾಖಲಾಗದ ದರ ಈಗ ಸಿಕ್ಕಿರುವುದು ಸಂತಸ ಮೂಡಿಸಿದೆ.

ಸೋಮವಾರ ತಿಪಟೂರು ಎಪಿಎಂಸಿಯಲ್ಲಿ ನಡೆದಿರುವ ಇ&ಹರಾಜಿನಲ್ಲಿ ಕ್ವಿಂಟಲ್​ ಕೊಬ್ಬರಿಗೆ ಗರಿಷ್ಠ 20,900 ರೂ. ಸಿಕ್ಕಿರುವುದು ತೆಂಗು ಸೀಮೆಯ ರೈತರ ಸಂತೋಷಕ್ಕೆ ಕಾರಣವಾಗಿದೆ. ಮಾದರಿ ಬೆಲೆ 20,500 ರೂ., ಕನಿಷ್ಠ ಬೆಲೆ 19,500 ರೂ. ದಾಖಲಾಗಿದ್ದು, ಮಾರುಕಟ್ಟೆಯಲ್ಲಿ ಕೊಬ್ಬರಿಯ ಆವಕ ಕಡಿಮೆಯಾಗಿರುವುದು ರೈತರಿಗೆ ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬಂತಿದೆ.

ತಿಪಟೂರು ಮಾರುಕಟ್ಟೆಯಲ್ಲಿ ಇತ್ತೀಚಿನ ಬದಲಾವಣೆಯಂತೆ ಪ್ರತಿ ಅಂಗಡಿಗಳಲ್ಲಿಯೂ ಪ್ರತ್ಯೇಕ ದರ ನೀಡಲಾಗುತ್ತಿದ್ದು, ಸರಾಸರಿ ಎಂಬಂತೆ ಮಾದರಿ ದರ 20,500 ರೂ. ಎಲ್ಲರಿಗೂ ಲಭ್ಯವಾಗಲಿದೆ. ಕೆಲವೊಂದು ಲಾಟ್​ಗೆ ಮಾತ್ರ ದಾಖಲೆಯ 19,500 ರೂ. ಲಭ್ಯವಾಗಿದೆ. 2016 ಹಾಗೂ 2018ರಲ್ಲಿ ಒಮ್ಮೆಗೆ ಮಾತ್ರ ಕೊಬ್ಬರಿ ಬೆಲೆ 18 ಸಾವಿರ ರೂ. ಗಡಿ ದಾಟಿದ ದಾಖಲೆ ಹೊಂದಿತ್ತು, 2025ರಲ್ಲಿ ಇತ್ತೀಚೆಗೆ 19 ಸಾವಿರ ರೂಪಾಯಿ ದಾಟಿ ದಾಖಲೆ ಬರೆದಿತ್ತು.

ಮಾರುಕಟ್ಟೆಯಲ್ಲಿ ಬೆಲೆ ಗಗನಕ್ಕೇರಿ ದೆಯಾದರೂ ಆವಕ ಬಂದಿರುವುದು 3056 ಕ್ವಿಂಟಾಲ್​ ಮಾತ್ರ. ಹಾಗಾಗಿ, ಹೆಚ್ಚು ಕೊಬ್ಬರಿ ಮಾರುಕಟ್ಟೆಗೆ ಬಂದಾಗಲೂ ಇದೇ ಬೆಲೆ ಇರುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ, ಮುಂದಿನ ಒಂದೆರಡು ವಾರಗಳ ಕಾಲ ಬೆಲೆ ಇನ್ನೂ ಸ್ವಲ್ಪ ಹೆಚ್ಚಾಗುವ ಸಾಧ್ಯತೆಯಿದೆಯಾದರೂ ರೈತರು ಬೆಲೆ ಹೆಚ್ಚಳಕ್ಕೆ ಕಾಯದೇ ಈಗಿರುವ ಬೆಲೆಗೆ ಕೊಬ್ಬರಿ ಮಾರುವುದು ಒಳಿತು ಎನ್ನಲಾಗಿದೆ.

ರುಚಿಗೆ ಹೆಸರಾಗಿರುವ ತಿಪಟೂರು, ಅರಸೀಕೆರೆ, ಹುಳಿಯಾರು ಮಾರುಕಟ್ಟೆಯ ಕೊಬ್ಬರಿಗೆ ಬೇಡಿಕೆ ಜಾಸ್ತಿಯಾಗಲಿದೆ. ಬುಧವಾರ ತಿಪಟೂರು ಮಾರುಕಟ್ಟೆಯಲ್ಲಿ ಕೊಬ್ಬರಿ ದಾಖಲೆಯ 20,900 ರೂಪಾಯಿಗೆ ಮಾರಾಟವಾಗಿದೆ, ತೆಂಗಿನಕಾಯಿ ಬೆಲೆ ಕೂಡ ಸದ್ಯಕ್ಕೆ 60 ರೂ. ಆಸುಪಾಸಿನಲ್ಲಿದ್ದು ಶ್ರಾವಣ ಆರಂಭವಾದರೆ ಮತ್ತಷ್ಟು ಏರಿಕೆ ಕಾಣಲಿದೆ ಎಂದು ವ್ಯಾಪಾರಿಗಳು ಅಭಿಪ್ರಾಯಪಡುತ್ತಾರೆ.

ಇಳುವರಿ ಕಡಿಮೆ: ಕೊಬ್ಬರಿ ದರ ಗಣನೀಯವಾಗಿ ಹೆಚ್ಚಳವಾಗಲು ಪ್ರಮುಖ ಕಾರಣ ಇಳುವರಿ ಕಡಿಮೆಯಾಗಿ, ಬೇಡಿಕೆ ಹೆಚ್ಚಾಗಿರುವುದೇ ಆಗಿದೆ. ತಿಪಟೂರು ಕೊಬ್ಬರಿಯ ಪ್ರಮುಖ ಮಾರುಕಟ್ಟೆ ಉತ್ತರ ಭಾರತವೇ ಆಗಿದ್ದು ಉತ್ತರ ಭಾರತದ ರಾಜ್ಯಗಳಿಗೆ ಸಾವಿರಾರು ಕ್ವಿಂಟಾಲ್​ ಕೊಬ್ಬರಿ ಪೂರೈಕೆಯಾಗುತ್ತಿದೆ. ದೇಶದಲ್ಲಿ ಎಣ್ಣೆ ಕಾಳುಗಳ ಆಮದು ತೆರಿಗೆ ದರವನ್ನು ಹೆಚ್ಚಿಸಿರುವುದು ಹಾಗೂ ಕಳೆದ 8 ವಾರಗಳಿಂದ ತಿಪಟೂರು ಎಪಿಎಂಸಿಯಲ್ಲಿ 3 ಸಾವಿರ ಆಸುಪಾಸು ಚೀಲ ಅವಕ ಮಾತ್ರ ಬಂದಿರುವುದು ಪೂರೈಕೆ ಕಡಿಮೆಯಾಗಿದ್ದು ಬೆಲೆ ಹೆಚ್ಚಳಕ್ಕೆ ಕಾರಣವಾಗಿರಬಹುದು, ಈಗ ರೈತರೆಲ್ಲಾ ಒಂದೇ ಸಮಯಕ್ಕೆ ಕೊಬ್ಬರಿಯನ್ನು ಮಾರುಕಟ್ಟೆಗೆ ತಂದರೆ ಬೆಲೆ ಕಡಿಮೆಯೂ ಆಗಬಹುದು ಹಾಗಾಗಿ, ಈಗಿರುವ ಬೆಲೆಗೆ ಕೊಬ್ಬರಿ ಮಾರುವುದು ಜಾಣತನವಾಗಬಹುದು.