ಜಿಲ್ಲೆ

ಕ್ವಾರಂಟೈನ್​ಗೆ ಒಳಗಾದವರ ತಕರಾರು

ಶಿಗ್ಗಾಂವಿ: ಸರ್ಕಾರಿ ಕ್ವಾರಂಟೈನ್​ನಲ್ಲಿ ಮೂಲಸೌಲಭ್ಯಗಳಿಲ್ಲದೆ ಸಂಕಷ್ಟದಲ್ಲಿಯೇ ಕಾಲಕಳೆಯುತ್ತಿರುವ ಜನರು ಫೋನ್ ಮೂಲಕ ಸಹಾಯಕ್ಕೆ ಬರುವಂತೆ ಅಂಗಲಾಚುತ್ತಿರುವ ಘಟನೆ ತಾಲೂಕಿನ ಜೇಕಿನಕಟ್ಟಿ ಗ್ರಾಮದ ನಡೆದಿದೆ.

ಲಾಕ್​ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಇತ್ತೀಚೆಗೆ ವಿವಿಧ ರಾಜ್ಯಗಳಿಂದ ತಾಲೂಕಿಗೆ ಆಗಮಿಸಿದ 25 ಜನರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಿರುವ ತಾಲೂಕು ಆಡಳಿತವು ಅವರನ್ನು ತಾಲೂಕಿನ ಜೇಕಿನಕಟ್ಟಿ ಗ್ರಾಮದ ಮುರಾರ್ಜಿ ವಸತಿ ಶಾಲೆಯಲ್ಲಿ ಸರ್ಕಾರಿ ಕ್ವಾರಂಟೈನಲ್ಲಿರಿಸಿದೆ. ಊಟ, ಉಪಾಹಾರದ ವ್ಯವಸ್ಥೆ ಹಾಗೂ ಆರೋಗ್ಯ ತಪಾಸಣೆ ನಡೆಸಲಾಗಿದೆ. ಆದರೆ, ಇಲ್ಲಿ ಉಳಿದುಕೊಳ್ಳಲು ಸ್ಥಳೀಯ ಆಡಳಿತ ಯಾವುದೇ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡಿಲ್ಲ. ಸರಿಯಾದ ಹಾಸಿಗೆಗಳಿಲ್ಲ. ಬೇರೆ ಬೇರೆ ರಾಜ್ಯಗಳಿಂದ ಬಂದವರನ್ನು ಒಟ್ಟಿಗೆ ಇರಿಸಲಾಗಿದೆ. ಇದರಿಂದ ಕರೊನಾ ವೈರಸ್ ಹರಡುವ ಭೀತಿ ಕಾಡುತ್ತಿದೆ. ಎಲ್ಲೆಂದರಲ್ಲಿ ಬಿದ್ದಿರುವ ಹರಿದ ಬಟ್ಟೆಗಳು, ಕಸ-ಕಡ್ಡಿ, ಜಿಡ್ಡುಗಟ್ಟಿದ ಕುಡಿಯುವ ನೀರಿನ ನಲ್ಲಿಗಳು, ದುರ್ವಾಸನೆ ಬೀರುತ್ತಿರುವ ಶೌಚಗೃಹಗಳು, ಸೊಳ್ಳೆಗಳ ಕಾಟದಿಂದ ನರಕಯಾತನೆ ಅನುಭವಿಸುವಂತಾಗಿದೆ ಎಂದು ಕ್ವಾರಂಟೈನ್​ಗೆ ಒಳಗಾದವರು ಆರೋಪಿಸುತ್ತಿದ್ದಾರೆ.

ಕಳೆದ 48 ಗಂಟೆಗಳಿಂದ ಕುಡಿಯಲು ಶುದ್ಧ ನೀರು ಪೂರೈಸಿಲ್ಲ. ಶೌಚಗೃಹಗಳ ನಲ್ಲಿಗಳಲ್ಲಿ ಬರುವ ನೀರನ್ನೇ ಸ್ನಾನಕ್ಕೆ ಮತ್ತು ಬೆಳಗ್ಗೆ ಹಲ್ಲುಜ್ಜಲು ಬಳಸಬೇಕಾಗಿದೆ. ರಾತ್ರಿ ವಿದ್ಯುತ್ ಕೈಕೊಟ್ಟರೆ ಇಡೀ ರಾತ್ರಿ ಕತ್ತಲಿನಲ್ಲಿಯೇ ಕಾಲ ಕಳೆಯಬೇಕು. ಊಟವನ್ನು ಸಹ ಕತ್ತಲಲ್ಲೇ ಮಾಡಬೇಕು. ಕನಿಷ್ಠ ಮೇಣದ ಬತ್ತಿಯನ್ನೂ ಒದಗಿಸುತ್ತಿಲ್ಲ. ಕೆಲವು ಶೌಚಗೃಹಗಳ ನಲ್ಲಿಗಳಲ್ಲಿ ನೀರು ಬರುತ್ತಿದ್ದರೆ, ಇನ್ನು ಕೆಲವು ಶೌಚಗೃಹಳ ನಲ್ಲಿಗಳಲ್ಲಿ ನೀರು ಬರುತ್ತಿಲ್ಲ. ಬಕೀಟು, ಚಂಬು ಸಹ ಇಲ್ಲ. ಇರುವ ನಾಲ್ಕು ಶೌಚಗೃಹಗಳನ್ನೇ ಎಲ್ಲರೂ ಬಳಸಬೇಕು. ಇದರಿಂದ ರೋಗ ಹರಡುವ ಭೀತಿ ಕಾಡುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.

ಸಮಸ್ಯೆ ಕುರಿತು ಸಂಬಂಧಪಟ್ಟ ಅಧಿಕಾರಿಗಳನ್ನು ಸಂರ್ಪಸಿದರೂ ಇತ್ತ ಗಮನ ಹರಿಸುತ್ತಿಲ್ಲ. ದಯವಿಟ್ಟು ನಮ್ಮ ಸಹಾಯಕ್ಕೆ ಬನ್ನಿ ಎಂದು ಫೋನ್ ಮೂಲಕ ಇಲ್ಲಿನ ಜನರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಕೆಲವು ಯುವಕರು ಮನೆಗೆ ಹೋಗುವ ಉದ್ದೇಶದಿಂದ ಕ್ವಾರಂಟೈನ್ ಮಾಡುವ ಮೊದಲಿನ ಫೋಟೋಗಳನ್ನು ಮಾಧ್ಯಮದವರಿಗೆ ನೀಡುತ್ತಿದ್ದಾರೆ. ಅಲ್ಲಿರುವವರಿಗೆ ತಹಸೀಲ್ದಾರ್, ಪುರಸಭೆ ಮುಖ್ಯಾಧಿಕಾರಿಗಳು ಎಲ್ಲ ಮೂಲಸೌಕರ್ಯಗಳನ್ನು ಒದಗಿಸಿದ್ದಾರೆ. ನಾನು ಸಹ ನಿನ್ನೆ ಸರ್ಕಾರಿ ಕ್ವಾರಂಟೈನ್ ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಅಲ್ಲಿ ಯಾವುದೇ ಸಮಸ್ಯೆ ಇಲ್ಲ.| ಅನ್ನಪೂರ್ಣ ಮುದಕಮ್ಮನವರ, ಸವಣೂರ ವಿಭಾಗಾಧಿಕಾರಿ