ಜಿಲ್ಲೆ

ಕ್ವಾರಂಟೈನ್ ಸ್ಥಳಕ್ಕೆ ನ್ಯಾಯಾಧೀಶರ ಭೇಟಿ

ಶಿರಹಟ್ಟಿ: ತಾಲೂಕಿನ ಇಬ್ಬರಿಗೆ ಕರೊನಾ ಸೋಂಕು ದೃಢಪಟ್ಟಿದ್ದರಿಂದ ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ 16 ಜನರನ್ನು ಕ್ವಾರಂಟೈನ್ ಮಾಡಿರುವ ಹರಿಪೂರ ಸರ್ಕಾರಿ ಬಾಲಕರ ವಸತಿ ನಿಲಯಕ್ಕೆ ಲಕ್ಷ್ಮೇಶ್ವರದ ಹಿರಿಯ ದಿವಾಣಿ ನ್ಯಾಯಾಧೀಶ ಎಂ.ಆರ್. ಒಡೆಯರ್ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.

ಕ್ವಾರಂಟೈನ್​ನಲ್ಲಿ ಇರುವವರ ಆರೋಗ್ಯ ವಿಚಾರಿಸಿದ ನ್ಯಾಯಾಧೀಶರು ನಂತರ ವೈದ್ಯಾಧಿಕಾರಿ ಡಾ. ವಿ.ಎಫ್. ಪಾಟೀಲ ಅವರಿಂದ ಮಾಹಿತಿ ಪಡೆದುಕೊಂಡರು. ನ್ಯಾಯಾಧೀಶರ ಎದುರು ಅಳಲು ತೋಡಿಕೊಂಡ ಕೆಲವರು, ‘ಸಾಹೇಬ್ರ... ವಿಚಾರಣೆ ಮಾಡಿ ಬಿಡ್ತೀವಿ ಅಂತಾ ನಮ್ಮನ್ನ ಕರಕೊಂಡು ಬಂದು ಇಲ್ಲಿ ಕೂಡಿ ಹಾಕ್ಯಾರ್ರಿ. ಬಟ್ಟೆ ಬರೆ ಇಲ್ದ ಜಳಕ ಹ್ಯಾಂಗ ಮಾಡಬೇಕು ಹೇಳ್ರಿ’ ಎಂದು ಅಲವತ್ತು ಕೊಂಡರು. ನಂತರ ನ್ಯಾಯಾಧೀಶರು ಅವರಿಗೆ ಬಟ್ಟೆ, ಮಾಸ್ಕ್, ಸ್ಯಾನಿಟೈಸರ್, ಶುದ್ಧ ಕುಡಿಯುವ ನೀರು ವಿತರಿಸಲು ಕ್ರಮ ಕೈಗೊಳ್ಳುವಂತೆ ವೈದ್ಯಾಧಿಕಾರಿಗೆ ಸೂಚಿಸಿದರು.

ಅಡುಗೆ ಕೋಣೆ ಹಾಗೂ ಶೌಚ, ಸ್ನಾನ ಗೃಹಗಳನ್ನು ಪರಿಶೀಲಿಸಿದ ನ್ಯಾಯಾಧೀಶರು ಅನೈರ್ಮಲ್ಯ ಕಂಡು ನಿಲಯ ಪಾಲಕರ ವಿರುದ್ಧ ಗರಂ ಆದರು. ‘ದಿನಕ್ಕೆ 3-4 ಬಾರಿ ಹೈಡ್ರೊಕ್ಲೋರಿನ್ ದ್ರಾವಣದಿಂದ ಸ್ವಚ್ಛತೆ ಕಾರ್ಯ ಕೈಗೊಳ್ಳಬೇಕು. ಕ್ವಾರಂಟೈನ್​ನಲ್ಲಿ ಇದ್ದವರಿಗೆ ತಟ್ಟೆ, ಲೋಟ, ಹಾಸಿಗೆ, ಚಾದರ, ದಿಂಬು, ಫ್ಯಾನ್, ಸೊಳ್ಳೆ ಬತ್ತಿ ಇತ್ಯಾದಿಗಳನ್ನು ಒದಗಿಸಿ ಯಾವುದೇ ದೂರು ಬರದಂತೆ ನೋಡಿಕೊಳ್ಳಬೇಕು’ ಎಂದು ಸೂಚಿಸಿದರು.

ಕ್ವಾರಂಟೈನ್​ನಲ್ಲಿ ಇರುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಆಗಾಗ ಸ್ಯಾನಿಟೈಸರ್ ಬಳಸಬೇಕು. ಗುಂಪು ಸೇರಿ ಹರಟೆ ಹೊಡೆಯದೆ ಪರಸ್ಪರ ಅಂತರ ಕಾಪಾಡಿಕೊಂಡು ಆರೋಗ್ಯ ಸಿಬ್ಬಂದಿಯ ಜೊತೆ 14 ದಿನ ಸೌಜನ್ಯದಿಂದ ವರ್ತಿಸಬೇಕು. ವರದಿ ನೆಗೆಟಿವ್ ಬಂದರೆ ಅವರನ್ನು ಮನೆಗೆ ಕಳಿಸಲಾಗುತ್ತದೆ ಎಂದರು.

ಈ ವೇಳೆ ವಕೀಲರಾದ ಎ.ಎ. ಬೇವಿನಗಿಡದ, ಎಂ.ಎಸ್. ಪವಾಡಶೆಟ್ಟರ್, ಪಿಎಸ್​ಐ ಎಸ್.ಎಂ. ನಾಯಕ, ಡಾ. ವಿ.ಎಂ. ಪಾಟೀಲ, ಬಸವರಾಜ ರೊಟ್ಟಿಗವಾಡ ಇತರರು ಇದ್ದರು.

ಸೇವಕರ ಮನ ನೋಯಿಸಬೇಡಿ: ಸೋಂಕಿನ ಲಕ್ಷಣಗಳಿಲ್ಲದಿದ್ದರೂ ನಮ್ಮನ್ನೇಕೆ ಇಲ್ಲಿಗೆ ಕರೆ ತಂದು ಶಿಕ್ಷೆ ನೀಡುತ್ತಿದ್ದೀರಿ ಎಂದು ಕ್ವಾರಂಟೈನ್​ನಲ್ಲಿ ಇರುವವರು ನನ್ನ ಮೇಲೆ ಹರಿಹಾಯುತ್ತಿದ್ದಾರೆ’ ಎಂದು ವೈದ್ಯಾಧಿಕಾರಿ ಡಾ. ವಿ.ಎಫ್. ಪಾಟೀಲ ನ್ಯಾಯಾಧೀಶರ ಎದುರು ಅಳಲು ತೋಡಿಕೊಂಡರು. ಈ ಕುರಿತು ಪ್ರತಿಕ್ರಿಯಿಸಿದ ನ್ಯಾಯಾಧೀಶರು, ‘ನೋಡಿ, ಇಬ್ಬರಿಗೆ ಕರೊನಾ ಸೋಂಕು ದೃಢಪಟ್ಟಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಗೆಯೇ ನಿಮ್ಮ ಹಾಗೂ ಕುಟುಂಬದವರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಮುಂಜಾಗ್ರತೆ ಕ್ರಮವಾಗಿ ಕ್ವಾರಂಟೈನ್ ಮಾಡಲಾಗಿದೆ. ಕಾಯಿಲೆಯ ಭೀಕರತೆ ಅರಿಯದೇ ಬೇಕಾಬಿಟ್ಟಿ ಮಾತನಾಡಿ ನಿಮ್ಮ ಸೇವಕರ ಮನ ನೋಯಿಸಬೇಡಿ’ ಎಂದು ಕ್ವಾರಂಟೈನ್​ನಲ್ಲಿ ಇರುವವರಿಗೆ ತಿಳಿ ಹೇಳಿದರು.