ಜಿಲ್ಲೆ

ಕ್ವಾರಂಟೈನ್ ನಿಯಮ ಇನ್ನಷ್ಟು ಬಿಗಿ

ಸುಭಾಸ ಹೆಗಡೆ ಧೂಪದಹೊಂಡ

ಸಿದ್ದಾಪುರ: ಜಿಲ್ಲೆಯಲ್ಲಿ ಕ್ವಾರಂಟೈನ್ ನಿಯಮವನ್ನು ಬಿಗಿಗೊಳಿಸಲಾಗಿದ್ದು ಇನ್ನು ಮುಂದೆ ಜಿಲ್ಲೆಗೆ ಹೊರಗಿನಿಂದ ಯಾರೇ ಬಂದರೂ ಅವರನ್ನು ಕ್ವಾರಂಟೈನಲ್ಲಿ ಇಡಲಾಗುತ್ತಿದೆ. ಮನೆ ಕ್ವಾರಂಟೈನ್ ವ್ಯವಸ್ಥೆ ಸ್ಥಗಿತಗೊಳಿಸಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಲಾಕ್ ಡೌನ್ ಇದ್ದರೂ ವಿವಿಧ ಜಿಲ್ಲೆಯಿಂದ ಜನರು ಆಗಮಿಸುತ್ತಿದ್ದಾರೆ. ಇನ್ನು ಮುಂದೆ ಕರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಕಾನೂನು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ. ಅದಕ್ಕೆ ಜನತೆ ಅವಕಾಶ ನೀಡಬೇಡಿ. ಇದು ಪ್ರತಿಯೊಬ್ಬರ ಜೀವನದ ಹಾಗೂ ಕುಟುಂಬದ ಅಳಿವು ಉಳಿವಿನ ಪ್ರಶ್ನೆಯಾಗಿದೆ ಎಂದು ಹೇಳಿದರು.

ಗೋವಾದಲ್ಲಿ ಜಿಲ್ಲೆಯ ಕಾರ್ವಿುಕರಿದ್ದಾರೆ. ಅವರ ಕಷ್ಟ ನಮಗೆ ಗೊತ್ತಿದೆ. ಅಲ್ಲಿಂದ ಬರುವುದಕ್ಕೆ ಅವಕಾಶ ನೀಡಿದರೆ ಉಳಿದ ರಾಜ್ಯದಲ್ಲಿದ್ದವರಿಗೂ ಬರುವುದಕ್ಕೆ ಅವಕಾಶ ನೀಡಬೇಕಾಗುತ್ತದೆ. ಇದರಿಂದ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ಗೋವಾಕ್ಕೆ ತಂಡವೊಂದನ್ನು ಕಳುಹಿಸಿ ಆ ತಂಡದ ವರದಿಯನ್ನಾಧರಿಸಿ ಕ್ರಮಕೈಗೊಳ್ಳಾಗುವುದು. ಸದ್ಯ ಖಾಸಗಿ ವೈದ್ಯರು ಆಸ್ಪತ್ರೆ ಮುಚ್ಚಬಾರದು.ಯಾವುದೇ ವ್ಯಕ್ತಿಗೆ ಕರೊನಾ ಬಂದಿದೆ ಎಂದೆನಿಸಿದರೆ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿ ಕೊಡಬೇಕು ಎಂದು ಅವರು ವಿನಂತಿಸಿದರು.

ಶಿವಮೊಗ್ಗ ಜಿಲ್ಲೆಯ ಕೆಎಫ್​ಡಿ ರೋಗಿಗಳಿಗೆ ಮಣಿಪಾಲ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತಿದ್ದರೆ ಅದೇ ನಿಯಮದಡಿ ನಮ್ಮ ಜಿಲ್ಲೆಯ ರೋಗಿಗಳಿಗೂ ಉಚಿತ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಕ್ರಮಕೈಗೊಳ್ಳಾಗುವುದು ಎಂದು ಸಚಿವರು ಭರವಸೆ ನೀಡಿದರು.

ಪಪಂ ಸದಸ್ಯ ಕೆ.ಜಿ. ನಾಯ್ಕ ಹಣಜೀಬೈಲ್, ಎಸಿ ಡಾ.ಈಶ್ವರ ಉಳ್ಳಾಗಡ್ಡಿ,ತಹಸೀಲ್ದಾರ್ ಮಂಜುಳಾ ಭಜಂತ್ರಿ, ಡಿವೈಎಸ್​ಪಿ ಜಿ.ಟಿ.ನಾಯಕ ಇತರರಿದ್ದರು.