ಜಿಲ್ಲೆ

ಕ್ಲಿಷ್ಟಕರ ಸಮಸ್ಯೆಗಳಿಗೆ ಕೃತಕ ಬುದ್ಧಿಮತ್ತೆಯಿಂದ ಪರಿಹಾರ:ವಿಜ್ಞಾನಿ ಪವನ್ ಮಿರ್ಲಾ

ಹಾಸನ: ಕೃತಕ ಬುದ್ಧಿಮತ್ತೆ ಬಳಸಿಕೊಂಡು ಕ್ಲಿಷ್ಟಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಎಐ (ಕೃತಕ ಬುದ್ಧಿಮತ್ತೆ) ಡೇಟಾ ವಿಜ್ಞಾನಿ ಪವನ್ ಮಿರ್ಲಾ ಹೇಳಿದರು.
ನಗರದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗದ ವತಿಯಿಂದ ಆಯೋಜಿಸಿದ್ದ ಆಯೋಜಿಸಿದ್ದ ‘ಕೃತಕ ಬುದ್ಧಿಮತ್ತೆ ಪ್ರಣೀತ ಆರ್ಥಿಕತೆ: ಅವಕಾಶಗಳು ಮತ್ತು ಸಿದ್ಧತೆ’ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಕೃತಕ ಬುದ್ಧಿಮತ್ತೆಯ ಸಾಮರ್ಥ್ಯ ಅಗಾಧವಾದುದು. ಕೃತಕ ಬುದ್ಧಿಮತ್ತೆ ಅಂದರೆ ಸದ್ಯ ಹೆಚ್ಚು ಬಳಕೆಯಲ್ಲಿರುವ ಮಾತನಾಡುವ ಬಾಟ್‌ಗಳಷ್ಟೇ ಅಲ್ಲ. ಮುಂಬರುವ ದಿನಗಳಲ್ಲಿ ಕ್ಲಿಷ್ಟ ಸಮಸ್ಯೆಗಳನ್ನು ಪರಿಹರಿಸಲು ಇದರ ಬಳಕೆ ವ್ಯಾಪಕವಾಗಲಿದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಪದವಿ ನಂತರ ಕೆಲಸ ಹುಡುಕುವವರಾಗಿ ಹೊರಹೊಮ್ಮುವ ಬದಲಿಗೆ, ಕ್ಲಿಷ್ಟ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ಕುಶಲ ತಂತ್ರಜ್ಞರಾಗಿ ರೂಪುಗೊಳ್ಳಬೇಕು. ಇಂದಿನ ಸಮಸ್ಯೆಗಳ ಸ್ವರೂಪ ಸಂಕೀರ್ಣವಾಗಿದ್ದು, ಅವುಗಳನ್ನು ಪರಿಹರಿಸಲು ವ್ಯಕ್ತಿಗತ ನೆಲೆಯಲ್ಲಿ ಸಾಧ್ಯವಿಲ್ಲ. ಸಂಕೀರ್ಣ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಂಘಟಿತ ಪ್ರಯತ್ನದ ಅಗತ್ಯವಿದೆ. ತಂಡದ ಭಾಗವಾಗಿ ಕೆಲಸ ನಿರ್ವಹಿಸಲು ಅಗತ್ಯವಿರುವ ಗುಣಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥೆ ಡಾ. ಜೆ. ಚಂದ್ರಿಕಾ, ಪ್ರಾಧ್ಯಾಪಕ ಬಿ.ಬಿ.ನೀಲಕಂಠಪ್ಪ ಹಾಗೂ ವಿದ್ಯಾಥಿಗಳು ಉಪಸ್ಥಿತರಿದ್ದರು.