ಕೋಲಾರ: ನಗರದ ಕ್ಲಾಕ್ ಟವರ್ ಮೇಲೆ ತ್ರಿವರ್ಣ ಧ್ವಜ ಹಾರಿಸಿಯೇ ತೀರುತ್ತೇನೆ ಎಂದು ಸಂಸದ ಮುನಿಸ್ವಾಮಿ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕ್ಲಾಕ್ ಟವರ್ ಯಾರಪ್ಪನ ಸ್ವತ್ತಲ್ಲ. ಆದರೆ ಕೆಲವರು ಅದರ ಮೇಲೆ ಹಸಿರು, ಕಪ್ಪು ಧ್ವಜಗಳನ್ನು ಹಾರಿಸುತ್ತಿದ್ದು, ಇದನ್ನು ತಡೆಯಬೇಕಿದೆ. ಅದಕ್ಕೆ ಕೇಸರಿ, ಹಸಿರು ಮತ್ತು ಬಿಳಿ ಬಣ್ಣ ಬಳಿದು, ತ್ರಿವರ್ಣಧ್ವಜ ಹಾರಿಸಬೇಕು ಎಂಬ ನಿರ್ಧಾರಕ್ಕೆ ಬಂದಿದ್ದೇನೆ ಎಂದರು. ರಾಷ್ಟ್ರಧ್ವಜ ಹಾರಿಸಲಿಕ್ಕಾಗಿ ಮಾ.18ರಿಂದ ಕ್ಲಾಕ್ ಟವರ್ ಬಳಿ ಏಕಾಂಗಿಯಾಗಿ ಅರ್ನಿದಿಷ್ಟಾವಧಿ ಧರಣಿ ನಡೆಸುತ್ತೇನೆ. ಮಾ.21ರ ತನಕ ನಗರದಲ್ಲಿ ಸೆಕ್ಷನ್ 144 ಇರುವುದರಿಂದ ಅಲ್ಲಿ ತನಕ ಒಬ್ಬನೇ ಧರಣಿ ಮಾಡುತ್ತಿದ್ದು, ನಂತರ ದೇಶ ಭಕ್ತಿ ಇರುವವರು ನನ್ನೊಂದಿಗೆ ಪಾಲ್ಗೊಳ್ಳಬಹುದು ಎಂದು ಹೇಳಿದರು. ಸಂಸತ್ ಸದಸ್ಯನಾಗಿ ಆಯ್ಕೆಯಾಗಿ 3 ವರ್ಷ ಕಳೆದಿದ್ದು, ಜಿಲ್ಲೆಯಲ್ಲಿ ಇಲ್ಲಿ ತನಕ ಯಾವುದೇ ಕೋಮುಗಲಭೆ ಜರುಗಿಲ್ಲ. ಅದಕ್ಕೆ ಆಸ್ಪದ ಮಾಡಿಕೊಡುವುದೂ ಇಲ್ಲ. ಜಿಲ್ಲೆಯಲ್ಲಿ ಹಿಂದು -ಮುಸ್ಲಿಮರು ಅಣ್ಣ&ತಮ್ಮಂದಿರಂತೆ ಬದುಕುತ್ತಿದ್ದಾರೆ. ಆದರೆ ಎಸ್ಡಿಪಿಆರ್ ನಂತಹ ಸಂಘಟನೆಗಳು ಕೋಮುಸಾಮರಸ್ಯ ಕದಡಲು ಯತ್ನಿಸುತ್ತಿವೆ. ನಾನು ಮುಳಬಾಗಿಲಿನ ಹಿಂದು ಸಮಾಜೋತ್ಸವದಲ್ಲಿ ಹೇಳಿದ ಮಾತನ್ನು ತಿರುಚಿ ಅಪಪ್ರಚಾರ ಮಾಡಲಾಗಿದೆ. ಇದಕ್ಕೆಲ್ಲ ಭಯಪಡುವವನು ನಾನಲ್ಲ ಎಂದು ಮುನಿಸ್ವಾಮಿ ಸ್ಪಷ್ಟನೆ ನೀಡಿದರು. ಕ್ಲಾಕ್ ಟವರ್ ಮೇಲೆ ರಾಷ್ಟ್ರದ್ವಜ ಹಾರಿಸುವುದಾಗಿ ಹೇಳಿದ್ದಕ್ಕೆ ಸುಹೇಲ್ ಎಂಬಾತ ಪೊಲೀಸ್ ವರಿಷ್ಠಾಧಿಕಾರಿಗೆ ನನ್ನ ವಿರುದ್ಧ ದೂರು ನೀಡಿದ್ದು, ಇಂತಹವರ ಚರಿತ್ರೆ ತಿಳಿದಿದೆ. ಯಾರಿಗೂ, ಯಾವ ಬೆದರಿಕೆಗಳಿಗೂ ಅಂಜುವ ಮಾತಿಲ್ಲ, ಧರಣಿ ನಡೆಸಿಯೇ ತೀರುತ್ತೇನೆ. ಮುಖ್ಯಮಂತ್ರಿ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಬಳಿ ಈ ಕುರಿತು ಚರ್ಚಿಸಿದ್ದು, ಅಗತ್ಯ ಕ್ರಮಕ್ಕೆ ಜಿಲ್ಲಾಡಳಿತದ ಗಮನಕ್ಕೆ ಸಹ ತಂದಿದ್ದೇನೆ ಎಂದು ವಿವರಿಸಿದರು.
ಕೆಲವು ಮುಸ್ಲಿಂ ಯುವಕರು ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಪೊಲೀಸರ ಬಳಿ ಎಲ್ಲ ವಿವರ ಇದೆ. ಮಾದಕ ವಸ್ತುಗಳ ಕಳ್ಳಸಾಗಾಣಿಕೆ, ಪಾಕಿಸ್ತಾನ, ಬಾಂಗ್ಲಾ ಉಗ್ರರಿಗೆ ಆಶ್ರಯ ನೀಡುವುದು ಸೇರಿ ನಾನಾ ಅಕ್ರಮಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಅಂತಹವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕಿದೆ. 2 ದಿನದ ಹಿಂದೆ ನಗರದಲ್ಲಿ 5-10 ರೂ.ಗೆ ಕೊಲೆ ಮಾಡಿರುವುದು ಇದಕ್ಕೆ ನಿದರ್ಶನ. ಬೆಂಗಳೂರಿನ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆಯಲ್ಲಿ ಜಿಲ್ಲೆಯ ಎಷ್ಟು ಮಂದಿ ಭಾಗವಹಿಸಿದ್ದರು ಎಂಬ ಬಗ್ಗೆ ಮಾಹಿತಿ ಇದೆ. ಹಲವರು ಗಾಂಜಾ, ಮಟ್ಕಾದಂತಹ ದಂಧೆಗಳಲ್ಲಿ ತೊಡಗಿಸಿಕೊಂಡಿದ್ದು, ಹತ್ತಾರು ಪ್ರಕರಣಗಳಲ್ಲಿ ಬೇಕಾದವರಾಗಿದ್ದಾರೆ. ಎಸ್.ಮುನಿಸ್ವಾಮಿ, ಸಂಸದ