ಜಿಲ್ಲೆ

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ


ಹಗರೆ : ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವ ರೂಢಿಸಿಕೊಳ್ಳಬೇಕು ಎಂದು ತಾಲೂಕು ಶಿಕ್ಷಣ ಸಂಯೋಜಕ ಕೆ.ಎಂ.ಗೊಪಾಲ್ ಹೇಳಿದರು.
ಮಾದೀಹಳ್ಳಿ ಹೋಬಳಿ ಶಿವಯೋಗಿಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಏನಾದರು ಸಾಧಿಸಬೇಕೆಂಬ ಛಲ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಹುಟ್ಟಬೇಕು. ಅದಕ್ಕಾಗಿಯೇ ಈ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತಿದೆ. ಮಕ್ಕಳಲ್ಲಿ ಹತ್ತು ಹಲವು ರೀತಿಯ ಸುಪ್ತ ಪ್ರತಿಭೆಗಳು ಅಡಕವಾಗಿರುತ್ತವೆ. ಅವುಗಳನ್ನು ಶಿಕ್ಷಕರು, ಪಾಲಕರು ಗುರುತಿಸಿ ಹೊರತರಬೇಕು ಎಂದರು.
ಪ್ರತಿಭಾ ಕಾರಂಜಿಯನ್ನು ಶಿವಯೋಗಿಪುರ ಗ್ರಾಮದ ಜನರು ಹಬ್ಬದಂತೆ ಆಚರಿಸುತ್ತಿದ್ದಾರೆ. ಇದು ಮಾದರಿ ಕಾರ್ಯ. ಗ್ರಾಮಸ್ಥರಿಗೆ ಸರ್ಕಾರಿ ಶಾಲೆ ಮತ್ತು ಶಿಕ್ಷಕರ ಮೇಲಿರುವ ಅಭಿಮಾನದ ಪ್ರತೀಕವಿದು ಎಂದರು.
ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಜಯಣ್ಣ ಮಾತನಾಡಿ, ಮಕ್ಕಳಲ್ಲಿನ ನಿಜವಾದ ಅರ್ಹತೆಯನ್ನು ಗುರುತಿಸಲು ಸ್ಪರ್ಧೆ ಸಹಕಾರಿಯಾಗಿದೆ ಎಂದರು.
ಪಾಲಕರು ಮೊದಲು ತಮ್ಮ ಮಕ್ಕಳನ್ನು ಪ್ರೇರೇಪಿಸಬೇಕು. ಶಿಕ್ಷಕರು ಉತ್ತೇಜನ ನೀಡಬೇಕು. ಆಗ ಮಕ್ಕಳ ಪ್ರತಿಭೆ ವಿಕಸನವಾಗುತ್ತದೆ ಎಂದವರು ನುಡಿದರು.
ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಟೈಲರ್ ಲೋಕೇಶ್ ಮಾತನಾಡಿ, ಗ್ರಾಮಸ್ಥರು ಖಾಸಗಿ ಶಾಲೆಗಳ ಮೇಲಿರುವ ಮೋಹ ಬಿಟ್ಟು ಸರ್ಕಾರಿ ಶಾಲೆಗಳನ್ನು ಬೆಂಬಲಿಸಬೇಕು. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ನಮ್ಮ ಮಕ್ಕಳು ಉಪಯೋಗಿಸಿಕೊಳ್ಳಬೇಕು ಎಂದರು.
ಸಮೂಹ ಸಂಪನ್ಮೂಲ ವ್ಯಕ್ತಿ ಮಧು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರಾದ ರಾಘವೇಂದ್ರ, ಸುಧಾಮಣಿ, ರೂಪಾ, ಎಸ್‌ಡಿಎಂಸಿ ಅಧ್ಯಕ್ಷ ವಿರುಪಾಕ್ಷ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಮ್ಮ, ಮುಖ್ಯ ಶಿಕ್ಷಕ ಜಗದೀಶ್, ಶಿಕ್ಷಕಿ ಸೌಭಾಗ್ಯಾ, ಪರಮೇಶ್, ಮಂಜು ಇತರರು ಇದ್ದರು.