ಜಿಲ್ಲೆ

ಕ್ರೈಸ್ತರ ಸಂಭ್ರಮಾಚರಣೆ

ಬೀದರ್: ರಾಜ್ಯ ಕಾಂಗ್ರೆಸ್ ಸರ್ಕಾರ ಮತಾಂತರ ನಿಷೇಧ ಕಾಯ್ದೆ ರದ್ದುಪಡಿಸುವ ನಿರ್ಣಯ ಕೈಗೊಂಡ ಪ್ರಯುಕ್ತ ಕ್ರೈಸ್ತರು ನಗರದಲ್ಲಿ ಶನಿವಾರ ಸಂಭ್ರಮಾಚರಿಸಿದರು.
ಇಂಡಿಯನ್ ಕ್ರಿಶ್ಚಿಯನ್ ವೆಲ್‍ಫೇರ್ ಅಸೋಸಿಯೇಷನ್ ಹಾಗೂ ಯುನೈಟೆಡ್ ಕ್ರಿಶ್ಚಿಯನ್ ಫೋರಂ ನೇತೃತ್ವದಲ್ಲಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಸೇರಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಖುಷಿ ಹಂಚಿಕೊಂಡರು.
ಮತಾಂತರ ನಿಷೇಧ ಹಾಗೂ ಎಪಿಎಂಸಿ ಕಾಯ್ದೆಗಳನ್ನು ರದ್ದುಪಡಿಸುವ ರಾಜ್ಯ ಸರ್ಕಾರದ ತೀರ್ಮಾನವು ರಾಜ್ಯದ ಜನರಿಗೆ ಸಂತಸ ಉಂಟು ಮಾಡಿದೆ ಎಂದು ಇಂಡಿಯನ್ ಕ್ರಿಶ್ಚಿಯನ್ ವೆಲ್‍ಫೇರ್ ಅಸೋಸಿಯೇಷನ್ ರಾಜ್ಯ ಅಧ್ಯಕ್ಷ ಸಂಜಯ್ ಜಾಗೀರದಾರ್ ತಿಳಿಸಿದರು.
ಹಿಂದಿನ ರಾಜ್ಯ ಸರ್ಕಾರ ಹಾಗೂ ಈಗಿನ ಕೇಂದ್ರದ ಬಿಜೆಪಿ ಸರ್ಕಾರದ ಅನೇಕ ಕಾಯ್ದೆಗಳಿಂದಾಗಿ ಜನ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಬಿಜೆಪಿ ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಕೋಮು ಸಾಮರಸ್ಯ ಕದಡುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರ ಮತಾಂತರ ಕಾಯ್ದೆ ರದ್ದುಪಡಿಸುವ ನಿರ್ಧಾರ ಕೈಗೊಂಡು ಕ್ರೈಸ್ತ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಟ್ಟಿದೆ ಎಂದು ಹೇಳಿದರು.
ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಜನ ಬಿಜೆಪಿ ದುರಾಡಳಿತಕ್ಕೆ ತಕ್ಕ ಪಾಠ ಕಲಿಸಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲೂ ಇದು ಪುನರಾವರ್ತನೆ ಆಗಲಿದೆ ಎಂದು ಹೇಳಿದರು.
ಪಾಸ್ಟರ್‍ಗಳಾದ ಮನೋಹರ, ಸಾವನ್ ಪೌಲ್, ಪ್ರಮುಖರಾದ ಜೀವನ್ ಜಾಗೀರದಾರ್, ಜಾಕೋಬ್ ಮುಸ್ತಾಪುರಕರ್, ಸಬಸ್ಟಿನ್ ಚಿದ್ರಿ, ರಮೇಶ ಕಟ್ಟಿತೂಗಾಂವ್, ಜೈಸನ್ ಮೋಡಿ, ಪ್ರಶಾಂತ ಗುತ್ತೇದಾರ್, ಸನ್ನಿ ಕಾಡವಾದ್, ಶಾಂತಕುಮಾರ ಗುಮ್ಮೆ, ಪಿಂಟು ಜಾಗೀರದಾರ್, ಸ್ವಾಮಿದಾಸ್ ಚಿದ್ರಿ ಮೊದಲಾದವರು ಪಾಲ್ಗೊಂಡಿದ್ದರು.