ಜಿಲ್ಲೆ

ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪಿಸಿ

Bidar

ಬೀದರ್: ತಡೆಹಿಡಿದ ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ ಹೆಚ್ಚಿನ ಅನುದಾನ ಒದಗಿಸುವಂತೆ ಒತ್ತಾಯಿಸಿ ಕರ್ನಾಟಕ ಕ್ರಿಶ್ಚಿಯನ್ ಹಕ್ಕುಗಳ ಸಮಿತಿಯಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಇಲ್ಲಿನ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ರ್ಯಾಲಿ ನಡೆಸಿ, ಮರಾಠಾ ಮತ್ತು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪಿಸಲಾಗಿದೆ. ಆದರೆ ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ರಚನೆಗೊಂಡಿದ್ದ ಕೈಸ್ತ ಅಭಿವೃದ್ಧಿ ನಿಗಮಕ್ಕೆ ಕಾರ್ಯರೂಪಕ್ಕೆ ತರದೇ ತಡೆ ಹಿಡಿದಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು.

ಸುದೀರ್ಘ ಬೇಡಿಕೆ, ನಿರಂತರ ಹೋರಾಟದಿಂದಾಗಿ ಹಿಂದಿನ ಸಮ್ಮಿಶ್ರ ಸರ್ಕಾರವು ಬಜೆಟ್ ನಲ್ಲಿ ಕ್ರೈಸ್ತ ಅಭಿವೃದ್ಧಿ ನಿಗಮ ಘೋಷಣೆ ಮಾಡಿ, 200 ಕೋಟಿ ರೂ. ಮೀಸಲಿಟ್ಟಿತ್ತು. ಆದರೆ ಸರ್ಕಾರ ಬದಲಾದ ನಂತರ ನಿಗಮವನ್ನು ತಡೆಹಿಡಿದು ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ ಎಂದು ಕಿಡಿಕಾರಿದರು.

ಬೇಡಿಕೆ ಸಂಬಂಧ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಯಿತು. ಸಮಿತಿ ಅಧ್ಯಕ್ಷ ಅನೀಲ ಜಾಧವ್, ಪ್ರಮುಖರಾದ ಸಂಜಯ್ ಜಾಗಿರ್ದಾರ, ಜಾನ್ ವೆಸ್ಲಿ, ಕುಮಾರ ಕೊಡ್ಡಿಕರ್, ಅಮರ ಭಾಂಗೆ, ಅನೀಲ ನಿಡೋದ, ಜಗನ್ನಾಥ ಕೌಠಾ, ಸುನೀತಾ ಆನಂದ, ಜಾಜ್೯ ನೇಳಗೆ, ವಸಂತ ಚಿದ್ರಿ, ಮಂಜುಳಾ, ಶಾಮರಾವ ಬಂಬುಳಗಿ, ಶಾಲಿನಿ, ವಸಂತ ಚಿದ್ರಿ, ಜಾನ್ ವರ್ಮಾ, ಜಾಜ್೯ ಫರ್ನಾಂಡಿಸ್, ರಾಜೇಶ ಜ್ಯೋತಿ ಇತರರಿದ್ದರು.

ರಾಜ್ಯದಲ್ಲಿ ಶೇ.4ರಷ್ಟು ಕ್ರೈಸ್ತ ಜನಾಂಗವಿದೆ. ಸಮುದಾಯದ ಜನರು ಅಲ್ಪಸಂಖ್ಯಾತರ ಇಲಾಖೆಯಲ್ಲಿ ವಿವಿಧ ಸೌಲಭ್ಯ ಪಡೆಯಲು ಕೇವಲ ಶೇ.10ರಷ್ಟು ಅವಕಾಶ ನೀಡಿ ಸರ್ಕಾರ ಸಮಾಜದ ಮೇಲೆ ಮಲತಾಯಿ ಧೋರಣೆ ಮಾಡುತ್ತಿದೆ. ಕೂಡಲೇ ಕ್ರೈಸ್ತ ನಿಗಮ ಸ್ಥಾಪಿಸಿ ಸೂಕ್ತ ಅನುದಾನ ಒದಗಿಸಬೇಕು.| ಅನೀಲ ಜಾಧವ್ಕ್ರಿಶ್ಚಿಯನ್ ಹಕ್ಕುಗಳ ಸಮಿತಿ ಜಿಲ್ಲಾಧ್ಯಕ್ಷ