ಜಿಲ್ಲೆ

ಕ್ರೀಡೆಯಿಂದ ಆರೋಗ್ಯ ವೃದ್ಧಿ, ಮಾನಸಿಕ ನೆಮ್ಮದಿ:ಎಸ್ಪಿ ಮೊಹಮ್ಮದ್ ಸುಜಿತಾ

ಹಾಸನ: ಸದಾ ಕಾಲ ಒತ್ತಡದಲ್ಲಿ ಕೆಲಸ ಮಾಡುವ ಪತ್ರಕರ್ತರು ದಿನದಲ್ಲಿ ಒಂದಷ್ಟು ಸಮಯ ಕ್ರೀಡೆಗಳಿಗೆ ಮೀಸಲಿಡುವುದರಿಂದ ಆರೋಗ್ಯವನ್ನು ಸಮತೋಲನದಲ್ಲಿ ಇಟುಕೊಳ್ಳಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜಿತಾ ಹೇಳಿದರು.
ನಗರದ ಸರ್ಕಾರಿ ಕಲಾ ಕಾಲೇಜು ಮೈದಾನದಲ್ಲಿ ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಭಾನುವಾರ ಆಯೋಜಿಸಿದ್ದ ಪತ್ರಕರ್ತರ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಾಸನ ಜಿಲ್ಲೆಯ ಪತ್ರಕರ್ತರಲ್ಲಿ ಒಗ್ಗಟ್ಟು ಇರುವುದನ್ನು ನಾನು ಯಾವ ಜಿಲ್ಲೆಯಲ್ಲೂ ನೋಡಿಲ್ಲ. ಇದೇ ರೀತಿ ಕ್ರೀಡಾಕೂಟಗಳನ್ನು ಹಮ್ಮಿಕೊಳ್ಳುವ ಮೂಲಕ ಆರೋಗ್ಯವನ್ನು ಸಮತೋಲನದಲ್ಲಿ ಕಾಪಾಡಿಕೊಳ್ಳಬಹುದು. ಒಂದು ಕಾರ್ಯಕ್ರಮ ನಡೆಸುವುದು ಸುಲಭದ ಕೆಲಸವಲ್ಲ. ಯಾವಾಗಲು ಕೆಲಸದ ಒತ್ತಡದಲ್ಲಿರುವ ಪತ್ರಕರ್ತರು ವರ್ಷಕ್ಕೊಮ್ಮೆಯಾದರೂ ಎಲ್ಲರೂ ಒಟ್ಟಾಗಿ ಸೇರಿರುವುದು ಸಂತೋಷ ತಂದಿದೆ. ನಿಮ್ಮ ಈ ಕ್ರೀಡಾಕೂಟ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಬಿ.ಆರ್. ಪೂರ್ಣಿಮಾ ಅವರು ಮಾತನಾಡಿ, ಪತ್ರಕರ್ತರು, ಸಮಾಜದಲ್ಲಿ ಕಂಡು ಬರುವ ತಪ್ಪುಗಳನ್ನು ಬರವಣಿಗೆ ಮೂಲಕ ತಿದ್ದಿ ಸರ್ಕಾರ, ಅಧಿಕಾರಿಗಳನ್ನು ಎಚ್ಚೆತ್ತುಕೊಳ್ಳುವ ಕೆಲಸ ಮಾಡುತ್ತಾರೆ. ಅಧಿಕಾರಿಗಳಿಗಿಂತ ಮೊದಲು ಪತ್ರಕರ್ತರಿಗೆ ಸಮಸ್ಯೆಗಳು ಕಾಣಿಸುತ್ತವೆ. ಅವರು ಮಾಡುವ ವರದಿಗಳಿಂದಲೇ ಎಲ್ಲಿ ಲೋಪವಾಗಿದೆ ಎಂಬುದನ್ನು ಅರಿತು ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ. ನಾನು ಗಮನಿಸಿದಂತೆ ಕಳೆದ ಬೇಸಿಗೆ ಸಮಸ್ಯೆಯಲ್ಲಿ ಕೆಲವು ಭಾಗಗಳಲ್ಲಿ ಸಮಸ್ಯೆ ಇರುವ ಬಗ್ಗೆ ನಮಗಿಂತ ಮೊದಲೇ ಮಾಧ್ಯಮದ ಮೂಲಕ ನಮ್ಮ ಗಮನಕ್ಕೆ ಬರುತ್ತದೆ. ಮಾಧ್ಯಮಗಳಲ್ಲಿ ವರದಿಯಾದಂತೆ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾದ 110 ಗ್ರಾಮಗಳಲ್ಲಿ ನೀರಿನ ಸಮಸ್ಯೆಯನ್ನು ಬಗೆಹರಿಸಿದ್ದೇವೆ ಎಂದರು.
ಈ ಕ್ರೀಡೆ ವರ್ಷಕ್ಕೊಮ್ಮೆ ಆಗದೇ ದಿನದ ಕೆಲ ಸಮಯವನ್ನು ಪತ್ರಕರ್ತರು ಕ್ರೀಡೆಗೆ ಮೀಸಲಿಡಬೇಕು. ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ಪತ್ರಕರ್ತರಿಗೆ ನಿವೇಶನ ನೀಡುವ ಯೋಜನೆ ಜಾರಿ ಮಾಡಲಾಯಿತು. ಕಾರ್ಯನಿರತ ಪತ್ರಕರ್ತರ ಸಂಘದಿಂದ ನಿವೇಶನಕ್ಕೆ ಮನವಿ ಕೊಟ್ಟು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಸಲಹೆ ನೀಡಿದರು.
ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಮಾತನಾಡಿ, ಪತ್ರಕರ್ತರ ಕುಟುಂಬ ಮತ್ತು ಮಕ್ಕಳು ಒಂದೆಡೆ ಸೇರಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಶ್ರವಣಬೆಳಗೊಳದ ಹಿಂದಿನ ಸ್ವಾಮೀಜಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಕೊಟ್ಟಂತಹ ಸಲಹೆಯನ್ನು ಇಂದಿಗೂ ಕೂಡ ಮುಂದುವರಿಸಿಕೊಂಡು ಬರುತ್ತಿದ್ದೇವೆ. ಹಾಸನ ಜಿಲ್ಲೆ ಇಡೀ ರಾಜ್ಯಕ್ಕೆ ಮಾದರಿಯಾಗಿ ಇಂತಹ ಚಟುವಟಿಕೆಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಇಂತಹ ಕ್ರೀಡಾಕೂಟಗಳಿಂದ ದೈಹಿಕವಾಗಿ, ಮಾನಸಿಕವಾಗಿ ಸದೃಢರಾಗಲು ಸಾಧ್ಯವಾಗಲಿದೆ ಎಂದು ಹೇಳಿದರು.
ಕ್ರೀಡಾಕೂಟದಲ್ಲಿ ಪತ್ರಕರ್ತರಿಗಾಗಿ ಓಟದ ಸ್ಪರ್ದೆ, ಗುಂಡು ಎಸೆತ, ಕ್ರಿಕೆಟ್ ಪಂದ್ಯಾವಳಿ ಏರ್ಪಡಿಸಲಾಗಿತ್ತು. ಹಾಸನ ಜಿಲ್ಲೆಯ ಎಲ್ಲಾ ತಾಲೂಕಿನ ಪತ್ರಕರ್ತರು ಕ್ರೀಡೆಯಲ್ಲಿ ಪಾಲ್ಗೊಂಡಿದ್ದರು.
ಈ ವೇಳೆ ರಾಜ್ಯ ಪತ್ರಕರ್ತರ ಸಂಘದ ಕಾರ್ಯಕಾರಣಿ ಸದಸ್ಯರಾದ ಎಚ್.ಬಿ. ಮದನ್ ಗೌಡ, ರವಿ ನಾಕಲಗೂಡು, ಕಾಂಗ್ರೆಸ್ ಮುಖಂಡ ಗೌಡಗೆರೆ ಪ್ರಕಾಶ್, ಸರ್ಕಾರಿ ಕಲಾ ಕಾಲೇಜು ಪ್ರಾಂಶುಪಾಲ ಡಾ.ಇರ್ಷಾದ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಚ್. ವೇಣುಕುಮಾರ್, ಡಿಎಚ್‌ಒ ಡಾ. ಶಿವಸ್ವಾಮಿ, ಜಿಲ್ಲಾ ಸರ್ಜನ್ ಡಾ.ಲೋಕೇಶ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಬಾಳ್ಳು ಗೋಪಾಲ್, ಉಪಾಧ್ಯಕ್ಷ ಮೋಹನ್ ಇತರರು ಉಪಸ್ಥಿತರಿದ್ದರು.