ಹಾಸನ: ಕ್ರೀಡೆ ಯಾವುದಾದರೇನು ಗೆಲ್ಲಲೆ ಬೇಕು ಎನ್ನುವ ದೃಢ ನಿರ್ಧಾರದ ಮನಸ್ಸು ಇದ್ದರೇ ಯಶಸ್ಸನ್ನು ಕಾಣಬಹುದು ಎಂದು ವೆಟ್ ಲಿಫ್ಟ್ ಕ್ರೀಡಾಪಟು ಉಷಾ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಗರದ ಹೊಸಲೈನ್ ರಸ್ತೆ ಬಳಿ ಇರುವ ಪೊಲೀಸ್ ಕವಾಯತ್ ಮೈದಾನದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಹಾಸನ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಯಾವುದೇ ಕ್ರೀಡೆ ಆಗಿರಲಿ ತನ್ನಲ್ಲಿ ಗೆಲ್ಲಲೆ ಬೇಕು ಎನ್ನುವ ಆಸಕ್ತಿ ಮೂಡಿಬೇಕು ಆಗ ಮಾತ್ರ ಗೆಲುವಿನ ಮೆಟ್ಟಿಲು ೀರಲು ಸಾದ್ಯ ಎಂದರು .ಕ್ರೀಡೆಯಲ್ಲಿ ಸೋಲು-ಗೆಲುವುಗಳು ಸಾಮಾನ್ಯ. ಮೊದಲು ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ. ನಂತರದಲ್ಲಿ ನಿಮ್ಮ ತರಬೇತಿ ಮೇಲೆ ಗೆಲುವು ನಿರ್ಧರಿಸಲಿದೆ. ಎಲ್ಲಾರೂ ಸ್ನೇಹಿತರಂತೆ ಕ್ರೀಡೆಯಲ್ಲಿ ಪಾಲ್ಗೊಂಡು ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸುವ ಮೂಲಕ ಪೊಲೀಸ್ ಕ್ರೀಡಾಕೂಟವನ್ನು ಯಶಸ್ವಿಗೊಳಿಸಿ ಎಂದು ಶುಭ ಹಾರೈಸಿದರು.
ಜಿಲ್ಲಾ ನ್ಯಾಯಾಧೀಶೆ ವಿಜಯಲಕ್ಷ್ಮಿ ಮಾತನಾಡಿ, ದಿನದ 24 ಗಂಟೆಯೂ ಮಾನಸಿಕ ಒತ್ತಡದಲ್ಲಿ ಕೆಲಸ ಮಾಡುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಇಂತಹ ಕ್ರೀಡೆಯಿಂದ ಸಲ್ಪವಾದರೂ ನೆಮ್ಮದಿ ಸಿಗಲಿದೆ. ಪ್ರಸ್ತುತ ಹೆಣ್ಣು ಮಕ್ಕಳು ಹೆಚ್ಚಿನ ರೀತಿಯಲ್ಲಿ ಕ್ರೀಡೆಗೆ ಬರುತ್ತಿರುವುದು ಸಂತೋಷದ ವಿಚಾರ. ಬಾರ ಎತ್ತುವ ಕ್ರೀಡೆಯಲ್ಲಿ ಸಾಧನೆ ಮಾಡಿರುವ ಉಷಾ ಅವರು ನಮಗೆಲ್ಲಾ ಸ್ಪೂರ್ತಿದಾಯಕ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಮಾತನಾಡಿ, ಪೊಲೀಸ್ ಇಲಾಖೆಯಿಂದ ಪ್ರತಿ ವರ್ಷ ಇಂತಹ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗುತ್ತ ಬಂದಿದ್ದೇವೆ. ವೃತ್ತಿಯಲ್ಲಿ ಆಗಿರುವ ಮಾನಸಿಕ ಒತ್ತಡವನ್ನೆಲ್ಲಾ ಮರೆತು ಮೂರು ದಿನದ ಕ್ರೀಡೆಯಲ್ಲಿ ಭಾಗವಹಿಸಿ ಸಂತೋಷವಾಗಿರಬೇಕು. ಇಡೀ ವರ್ಷ ಕ್ರೀಡೆಯಲ್ಲಿ ಇದ್ದು, ಆರೋಗ್ಯವನ್ನು ಸಮತೋಲನದಲ್ಲಿಡಲಿ ಎಂಬುದು ನಮ್ಮ ಉದ್ದೇಶವಾಗಿದೆ. ಎಲ್ಲಾ ಕ್ರೀಡೆಯಲ್ಲಿ ಪೊಲೀಸ್ ಸಿಬ್ಬಂದಿಗಳು ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಿದರು.
ಕಾರ್ಯಕ್ರಮದಲ್ಲಿ ಪೊಲೀಸ್ ಸಿಬ್ಬಂದಿಗಳಿಂದ ಗೌರವ ಸಮರ್ಪಣೆಯ ಪಥ ಸಂಚಲನ, ಕ್ರೀಡಾ ಜ್ಯೋತಿಯನ್ನು ಬರಮಾಡಿಕೊಂಡು ಹಾಗೂ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಕೊನೆಯಲ್ಲಿ ಕ್ರೀಡಾಪಟು ಉಷಾ ಗುಂಡು ಎಸೆತದ ಮೂಲಕ ಅಧಿಕೃತವಾಗಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಂ.ಕೆ. ತಮ್ಮಯ್ಯ ಇತರರು ಇದ್ದರು.