ಎನ್.ಆರ್.ಪುರ: ಕ್ರೀಡೆಯಲ್ಲಿ ದೊಡ್ಡ ಸಾಧನೆ ಮಾಡಿದವರಿಗೆ ಸರ್ಕಾರಿ ಉದ್ಯೋಗದಲ್ಲೂ ಮೀಸಲಾತಿ ಇರುವುದರಿಂದ ಮಕ್ಕಳು ಕ್ರೀಡಾಸಕ್ತಿ ಬೆಳೆಸಿಕೊಳ್ಳಬೇಕು ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದಾ ಹೇಳಿದರು.
ಕುವೆಂಪು ಕ್ರೀಡಾಂಗಣದಲ್ಲಿ ಶ್ರೀ ಜ್ವಾಲಾಮಾಲಿನಿ ಎಜುಕೇಷನ್ ಸೊಸೈಟಿ ಹಾಗೂ ಬಸ್ತಿಮಠದ ಶ್ರೀ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ ಅವರ ಆಶೀರ್ವಾದದೊಂದಿಗೆ ನಡೆದ ತಾಲೂಕು ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ಮಾತನಾಡಿ, ಯುವಜನರು ಗುರಿ ಇಟ್ಟುಕೊಂಡು ಯಶಸ್ಸು ಗಳಿಸಬೇಕು. ಯಾವುದೇ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರೂ ಶ್ರದ್ಧೆ, ಕಠಿಣ ಪರಿಶ್ರಮದಿಂದ ಕೆಲಸ ಮಾಡಿದರೆ ಹೆಜ್ಜೆ ಗುರುತು ಮೂಡಿಸಲು ಸಾಧ್ಯ ಎಂದರು.
ಪಪಂ ಸದಸ್ಯ ಮುಕುಂದ ಮಾತನಾಡಿ, ಮಲೆನಾಡಿನಲ್ಲಿ ಆಗಸ್ಟ್, ಸೆಪ್ಟೆಂಬರ್‌ನಲ್ಲಿ ನಿರಂತರವಾಗಿ ಮಳೆ ಸುರಿಯುವುದರಿಂದ ಮಕ್ಕಳು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದು ಕಷ್ಟಕರವಾಗುತ್ತಿದೆ. ಆದ್ದರಿಂದ ಬೇರೆ ಸಮಯದಲ್ಲಿ ಕ್ರೀಡಾಕೂಟ ಆಯೋಜಿಸುವುದು ಒಳಿತು ಎಂದು ಅಭಿಪ್ರಾಯಪಟ್ಟರು.
ಪ್ರಭಾರ ಬಿಇಒ ಸೇವ್ಯಾನಾಯಕ್ ಮಾತನಾಡಿ, ಕ್ರೀಡೆಯಲ್ಲಿ ಸೋತವರು ಕುಗ್ಗದೆ ಸೂಕ್ತ ತರಬೇತಿ ಪಡೆದು ಮುಂದಿನ ಕ್ರೀಡೆಯಲ್ಲಿ ಗೆಲ್ಲಬೇಕು ಎಂದು ತಿಳಿಸಿದರು.
ತಾಲೂಕಿನ 22 ಪ್ರೌಢಶಾಲೆಗಳ ಮಕ್ಕಳು ಕ್ರೀಡೆಯಲ್ಲಿ ಭಾಗವಹಿಸಿದ್ದರು. ವಾಲೀಬಾಲ್, ಥ್ರೋಬಾಲ್, ಕಬಡ್ಡಿ, ಬಾಲ್ ಬ್ಯಾಡ್ಮಿಟನ್ ಪಂದ್ಯಾವಳಿ ನಡೆಯಿತು. ಪಪಂ ಉಪಾಧ್ಯಕ್ಷೆ ಉಮಾ ಕೇಶವ್, ಸದಸ್ಯೆ ಸುರೈಯಾ ಬಾನು, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಜಯರಾಂ, ನಾಗರಾಜ್, ದೇವರಾಜ್, ಕೆಪಿಎಸ್ ಉಪ ಪ್ರಾಚಾರ್ಯ ರುದ್ರಪ್ಪ, ಬ್ರಹ್ಮದೇವ ಜೈನ್, ಸುಜಾತಾ, ಕಟ್ಟೇಗೌಡ, ರಮೇಶ್, ವಾಸು, ದೇವರಾಜ್, ಗುಣಪಾಲ್ ಜೈನ್ ಇತರರಿದ್ದರು.