ವಿರಾಜಪೇಟೆ: ತವರುಮನೆ ಹೆಣ್ಣು ಮಕ್ಕಳಿಗೆ ದೇವಾಲಯ ಇದ್ದಂತೆ. ಸಾಮರಸ್ಯದ ಜೀವನ ನಡೆಸಲು ತವರು ಮನೆ ಗಿಳಿಗೂಡಿನಂತೆ ಸಹಕಾರಿ ಎಂದು ನಿವೃತ ಶಿಕ್ಷಕಿ ಬಯವಂಡ ಇಂದಿರಾ ಬೆಳ್ಯಪ್ಪ ಅಭಿಪ್ರಾಯಪಟ್ಟರು.
ದೇವಣಗೇರಿ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ದೇವಣಗೇರಿ ಮೂಕೊಂಡ ಕುಟಂಬ ವತಿಯಿಂದ ಆಯೋಜಿಸಿದ್ದ ಕೌಟುಂಬಿಕ ಫೈವ್ ಸೈಡರ್ಸ್ ಫುಟ್‌ಬಾಲ್ ಪಂದ್ಯಾಟದ ಅತಿಥಿಯಾಗಿ ಮಾತನಾಡಿದ ಅವರು, ಇಂತಹ ಪಂದ್ಯಾಟಗಳನ್ನು ಆಯೋಜಿಸುವುದರಿಂದ ಕುಟುಂಬಗಳ ನಡುವೆ ಇರುವ ಸಣ್ಣಪುಟ್ಟ ವೈಮನಸ್ಸು ದೂರವಾಗಿ ಪ್ರೀತಿ-ವಿಶ್ವಾಸದಿಂದ ಜೀವನ ನಡೆಸಲು ಸಾಧ್ಯ ಎಂದು ಹೇಳಿದರು.
ಮೂಕೊಂಡ ಕುಟುಂಬದ ಅಧ್ಯಕ್ಷ ರಾಜ ಬೋಪಣ್ಣ ಮಾತನಾಡಿ, ಕೊಡವ ಜನಾಂಗದಲ್ಲಿ ಹಾಕಿ, ಕ್ರಿಕೆಟ್, ವಾಲಿಬಾಲ್, ಟಗ್ ಆಫ್ ವಾರ್‌ನಂತಹ ಕ್ರೀಡೆಗಳನ್ನು ನಡೆಸಲಾಗುತ್ತಿದೆ. ಕುಟುಂಬ ಸದಸ್ಯರಿಗೆ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಇರುವ ಕಾರಣ ಇದೇ ಮೊದಲ ಬಾರಿಗೆ ಫುಟ್‌ಬಾಲ್ ಪಂದ್ಯಾಟ ನಡೆಸುತ್ತಿರುವ ಹೆಗ್ಗಳಿಕೆ ಮೂಕೊಂಡ ಕುಟುಂಬಕ್ಕೆ ಸೇರುತ್ತದೆ ಎಂದು ಹೇಳಿದರು.
ಕ್ರೀಡಾ ಸಂಚಾಲಕ ಮೂಕೊಂಡ ಶಶಿ ಸುಬ್ರಮಣಿ ಮಾತನಾಡಿ, ಯಾವುದೇ ಕ್ರೀಡೆಯಾದರೂ ಕೊಡವ ಜನಾಂಗದ ಒಬ್ಬ ಪ್ರತಿನಿಧಿ ಭಾಗವಹಿಸಿತ್ತಾರೆ. ಕೊಡವ ಜನಾಂಗದಲ್ಲಿ ಕ್ರೀಡೆ ರಕ್ತಗತವಾಗಿ ಬಂದಿದೆ. ಒಂದು ಕುಟುಂಬದಲ್ಲಿ ಎಲ್ಲರೂ ಕ್ರೀಡಾಪಟುಗಳಾಗಿಲ್ಲದಿದ್ದರೂ ಐದಾರು ಜನರು ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಅಂತಹವರಿಗೆ ಇಂತಹ ಫೈವ್‌ಸೈಡರ್ಸ್ ಫುಟ್‌ಬಾಲ್ ಪಂದ್ಯ ಸಹಕಾರಿ. ಮೂರು ದಿನ ನಡೆಯುವ ಪಂದ್ಯಾಟದಲ್ಲಿ 32 ಕುಟುಂಬಗಳು ಭಾಗವಹಿಸುತ್ತಿವೆ ಎಂದು ಹೇಳಿದರು.
ಕಾಫಿ ಬೆಳೆಗಾರ ಮೂಕೊಂಡ ರಘುರಾಮಚ್ಚ ಪಂದ್ಯಾಟ ಉದ್ಘಾಟಿಸಿದರು. ಮೂಕೊಂಡ ರೋಹಿತ್ ಕಾರ್ಯಕ್ರಮ ನಿರೂಪಿಸಿ ವೀಕ್ಷಕ ವಿವರಣೆ ನೀಡಿದರು.