2023-24 ನೇ ಸಾಲಿಗೆ ಕ್ರೀಡಾ ವಸತಿ ಶಾಲೆ, ವಸತಿ ನಿಲಯಗಳಿಗೆ ಪ್ರವೇಶ ನೀಡುವ ಕುರಿತು ಕಿರಿಯರ ವಿಭಾಗದಲ್ಲಿ ಕ್ರೀಡಾಪಟುಗಳ ಆಯ್ಕೆಯ ಅಂತಿಮ ಪರಿಶೀಲನಾ ಪ್ರಕ್ರಿಯೆ ಆರಂಭಗೊಂಡಿದೆ. 
ಜಿಲ್ಲೆ

ಕ್ರೀಡಾಶಾಲೆ ಪ್ರವೇಶ ಆಯ್ಕೆ ಆರಂಭ

ಕುಶಾಲನಗರ: ರಾಜ್ಯದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ 2023-24ನೇ ಸಾಲಿಗೆ ಕ್ರೀಡಾ ವಸತಿ ಶಾಲೆ, ವಸತಿ ನಿಲಯಗಳಿಗೆ ಪ್ರವೇಶ ನೀಡುವ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆಗೆ ಮಂಗಳವಾರ ಚಾಲನೆ ನೀಡಲಾಯಿತು.
ವಿವಿಧ ಹಂತಗಳಿಂದ ಆಯ್ಕೆಯಾದ ಕಿರಿಯ ವಿದ್ಯಾರ್ಥಿಗಳಿಗೆ ಕೂಡಿಗೆಯ ಸರ್ಕಾರಿ ಕ್ರೀಡಾ ಪ್ರೌಢಶಾಲಾ ಆವರಣದಲ್ಲಿ ಮುಂದಿನ 7 ದಿನಗಳ ಕಾಲ ತರಬೇತಿ ನೀಡಲಾಗುತ್ತದೆ. ಏ. 10 ರಿಂದ ಮೇ 5 ರವರೆಗೆ ಹಿರಿಯರ ವಿಭಾಗದ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಕಿರಿಯರ ವಿಭಾಗದ ಹಾಕಿ ಕ್ರೀಡೆಯಲ್ಲಿ ಒಟ್ಟು 52 ವಿದ್ಯಾರ್ಥಿಗಳಿದ್ದು 22 ಬಾಲಕಿಯರು, 30 ಬಾಲಕರು, ಫುಟ್‌ಬಾಲ್ ವಿಭಾಗದಲ್ಲಿ 25, ಜಿಮ್ನಾಸ್ಟಿಕ್‌ನಲ್ಲಿ ಒಬ್ಬ ಬಾಲಕಿ, ಇಬ್ಬರು ಬಾಲಕರು ಭಾಗವಹಿಸಿ ಅಂತಿಮ ಆಯ್ಕೆ ಪ್ರಕ್ರಿಯೆಗೆ ನೋಂದಣಿಯಾಗಿದ್ದಾರೆ. ನೋಂದಣಿಯಾದ ಎಲ್ಲ ವಿದ್ಯಾರ್ಥಿಗಳಿಗೆ ಇಲಾಖೆ ವತಿಯಿಂದ ವಸತಿ ಸೌಲಭ್ಯ ಮತ್ತು ಅಹಾರದ ವ್ಯವಸ್ಥೆ ಒದಗಿಸಲಾಗಿದೆ ಎಂದು ಶಿಬಿರಾಧಿಕಾರಿ ಬಿ.ಎಸ್.ವೆಂಕಟೇಶ್ ಮಾಹಿತಿ ನೀಡಿದ್ದಾರೆ.
ಏ.18 ರಿಂದ 24 ರವರೆಗೆ ಹಾಕಿ ವಿಭಾಗದಿಂದ ಬಿ.ಎಸ್. ವೆಂಕಟೇಶ್, ಸಂಚಾಲಕ ದಿನಮಣಿ, ಬಿಂದಿಯಾ, ಸುಂದರೇಶ್, ವಿಜಯಕೃಷ್ಣ, ರವೀಶ್ ತರಬೇತಿ ನೀಡುತ್ತಿದ್ದು, ಫುಟ್ಬಾಲ್ ವಿಭಾಗದಲ್ಲಿ ಚಾಮರಾಜನಗರ ಜಿಲ್ಲೆಯ ಬಿ.ಕೆ.ಗೋಪಾಲ್, ಮಂಡ್ಯದ ಬಾಬು ಗುರುರಾಜ್, ಹಾಸನದ ಕೃಷ್ಣ, ಬೆಂಗಳೂರಿನ ಮಹಮ್ಮದ್ ಮಸೂದ್, ಜಿಮ್ನಾಸ್ಟಿಕ್ ವಿಭಾಗದಲ್ಲಿ ಕೂಡಿಗೆ ಕ್ರೀಡಾ ಶಾಲೆಯ ತರಬೇತಿದಾರ ಸುರೇಶ್, ಮೈಸೂರು ಲೋಕೇಶ್, ತುಮಕೂರು ಸುಧೀರ್, ದೇವದಾಸ್ ಭಾಗವಹಿಸಿ ತರಬೇತಿ ನೀಡಿದ್ದಾರೆ. ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕ್ರೀಡಾ ಪ್ರೌಢಶಾಲಾ ಮುಖ್ಯ ಶಿಕ್ಷಕ ದೇವಕುಮಾರ್ ವಿದ್ಯಾರ್ಥಿಗಳಿಗೆ ಅಗತ್ಯ ಸಲಹೆ, ಸೂಚನೆಗಳನ್ನು ನೀಡಲಿದ್ದಾರೆ ಎಂದು ಶಿಬಿರದ ಸಂಚಾಲಕ ಬಿ.ಎಸ್. ವೆಂಕಟೇಶ್ ತಿಳಿಸಿದ್ದಾರೆ.