ವಿಜಯವಾಣಿ ಸುದ್ದಿಜಾಲ ಧಾರವಾಡ
ಇಂದಿನ ಯುವ ಕ್ರೀಡಾಪಟುಗಳು ಭಾರತದ ಕ್ರೀಡಾ ಸಾಧಕರ ಜೀವನದ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಸೋಲು ಗೆಲವುಗಳನ್ನು ಸಮಾನವಾಗಿ ಕಾಣುವ ಕ್ರೀಡಾನೋಭಾವವೇ ಜೀವನದ ಯಶಸ್ಸಿನ ಗುಟ್ಟು. ಅದನ್ನು ಅರಿತು ನಡೆಯಬೇಕು ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದ ಒಳಾಂಗಣದಲ್ಲಿ ಜಿಲ್ಲಾಡಳಿತದಿಂದ ಮೇಜರ್ ಧ್ಯಾನಚಂದ್ ಜನ್ಮ ದಿನಾಚರಣೆ ಪ್ರಯುಕ್ತ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯಿತಿ ಸಿಇಒ ಭುವನೇಶ ಪಾಟೀಲ ಮಾತನಾಡಿ, ಪ್ರತಿಯೊಬ್ಬರೂ ಕ್ರೀಡಾ ಹವ್ಯಾಸ ಹೊಂದಿರಬೇಕು. ಮೇಜರ್ ಧ್ಯಾನಚಂದ್ ಅವರಂತೆ ಏಕಾಗ್ರತೆ, ಸಾಧನೆಗೆ ಅಚಲ ಮನಸ್ಸು, ತರಬೇತಿಯಲ್ಲಿನ ತನ್ಮಯತೆ ಮತ್ತು ನಿರ್ದಿಷÀ್ಟ ಗುರಿ ಇರಬೇಕು. ಅಂದಾಗ ಕ್ರೀಡೆಯಲ್ಲಿ ಉನ್ನತ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಕವಿವಿ ಕ್ರೀಡಾ ವಿಭಾಗದ ವಿಶ್ರಾಂತ ಮುಖ್ಯಸ್ಥ ಪ್ರೊ. ಬಿ.ಎಂ. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಯುವಜನ ಮತ್ತು ಕ್ರೀಡಾ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಸದಾನಂದ ಅಮರಾಪೂರ ಸ್ವಾಗತಿಸಿದರು. ಜಿನ್ನಪ್ಪ ಕುಂದಗೋಳ ನಿರೂಪಿಸಿದರು. ಎಸ್.ಎಸ್. ಭಾವಿಕಟ್ಟಿ ವಂದಿಸಿದರು.
ಜಿಮ್ನಾಸ್ಟಿಕ್ ತರಬೇತುದಾರ ವಿಠ್ಠಲ ಮುರ್ತಗುಡ್ಡೆ, ನಿವೃತ್ತ ಡಿಡಿಪಿಐ ಗಜಾನನ ಮನ್ನಿಕೇರಿ, ಭಾರತೀಯ ಕ್ರೀಡಾ ಪ್ರಾಽಕಾರದ ಆಡಳಿತಾಽಕಾರಿ ರಾಮ ಬುಡಕಿ ಇದ್ದರು. ನಿವೃತ್ತ ಖೋಖೋ ತರಬೇತುದಾರ ಕೆ. ಸುಜಯಕುಮಾರ, ನಿವೃತ್ತ ಹಾಕಿ ತರಬೇತುದಾರರಾದ ಗಂಗಾಧರ ತಪಶಟ್ಟಿ, ಸುರೇಶ ಆಡಿನ್, ನಿವೃತ್ತ ಬಾಸ್ಕೆಟ್‌ಬಾಲ್ ತರಬೇತುದಾರ ಗಣೇಶ ವಾಡಕರ, ಅಥ್ಲೆಟಿಕ್ಸ್ ತರಬೇತುದಾರ ಆರ್.ಕೆ. ಪಡತಾರೆ, ಕ್ರೀಡಾಪಟುಗಳು, ಕ್ರೀಡಾಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕ್ರೀಡಾ ಸಾಧಕರು, ಮಾಜಿ ಕ್ರೀಡಾ ತರಬೇತುದಾರರಿಗೆ ಸನ್ಮಾನಿಸಲಾಯಿತು. ಇದೇವೇಳೆ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು.