ಜಿಲ್ಲೆ

ಕ್ರೀಡಾಪಟು ಬೆಳಗೊಳದ ಚಿರಂತ್‌ಗೆ ಚಿನ್ನದ ಪದಕ

ಕೆ.ಆರ್.ಸಾಗರ: ಒರಿಸ್ಸಾದ ಭುವನೇಶ್ವರ್‌ನಲ್ಲಿ ಡಿ.7ರಿಂದ 11ರವರೆಗೆ ನಡೆದ 18 ವರ್ಷ ಒಳಗಿನ ವಿದ್ಯಾರ್ಥಿಗಳ ಅಖಿಲ ಭಾರತ 39ನೇ ಜೂನಿಯರ್ ಅಥ್ಲೆಟಿಕ್ಸ್‌ನಲ್ಲಿ ಕರ್ನಾಟಕದ 4 ವಿದ್ಯಾರ್ಥಿಗಳ ರಿಲೇ ತಂಡದಲ್ಲಿ ಬೆಳಗೊಳದ ಪಿ.ಚಿರಂತ್ ಭಾಗವಹಿಸಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ.

ಇದಲ್ಲದೆ ವೈಯಕ್ತಿಕವಾಗಿ 100 ಮೀಟರ್ ಓಟದಲ್ಲಿ 6ನೇ ಸ್ಥಾನ ಪಡೆದಿದ್ದಾರೆ. ಇವರ ಜತೆ ಕರ್ನಾಟಕ ತಂಡದಲ್ಲಿ ವಿವಿಧ ಕಾಲೇಜಿನ ಮೂವರು ವಿದ್ಯಾರ್ಥಿಗಳು ರಿಲೆಯಲ್ಲಿ ಪಾಲ್ಗೊಂಡಿದ್ದರು.

2024ರ ನ.7ರಂದು ತುಮಕೂರಿನಲ್ಲಿ ನಡೆದ ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) ವಿದ್ಯಾರ್ಥಿಗಳ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ 100 ಮೀ. ಓಟದಲ್ಲಿ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕ ಗಳಿಸಿದ್ದರು. ನಂತರ 200 ಮೀ. ಓಟದ ಸ್ಪರ್ಧೆಯಲ್ಲಿ ಉತ್ತಮ ಆಟ ಪ್ರದರ್ಶಿಸಿ ಬೆಳ್ಳಿ ಪದಕ ಪಡೆದಿದ್ದರು.

ಆಂಧ್ರಪ್ರದೇಶದ ಗುಂಟೂರಿನಲ್ಲಿ 2024ರ ಅ.7ರಂದು ನಡೆದ 35ನೇ ದಕ್ಷಿಣ ಭಾರತ (ಸೌತ್ ಜೋನ್) ಜೂನಿಯರ್ ಅಥ್ಲೆಟಿನ 100 ಮೀ ಓಟದಲ್ಲಿ ವೈಯಕ್ತಿಕವಾಗಿ ಭಾಗವಹಿಸಿ ಚಿನ್ನದ ಪದಕ ಪಡೆದುಕೊಂಡಿದ್ದರು.

ಮೈಸೂರಿನ ಟ್ರಿನಿಟಿಕ್ ಪಿಯು ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಯಾದ 17 ವರ್ಷದ ಪಿ.ಚಿರಂತ್, ಬೆಳಗೊಳ ಗ್ರಾಮದಿಂದಲೇ ಮೈಸೂರಿಗೆ ಹೋಗಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ತಮ್ಮ ಕಾಲೇಜಿನಿಂದ ನೇರವಾಗಿ ಆಯ್ಕೆಯಾಗಿ ಮೈಸೂರಿನಲ್ಲಿ ನಡೆದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದರು.

ಕ್ರೀಡಾಕೂಟದಲ್ಲಿ ಭಾಗವಹಿಸಿ ಒಂದೊಂದೇ ಮೆಟ್ಟಿಲು ಹತ್ತುತ್ತಿರುವ ಅವರನ್ನು ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಅಭಿನಂದಿಸಿದ್ದಾರೆ. ಪಿ.ಚಿರಂತ್ ಅವರು ಬೆಳಗೊಳ ಗ್ರಾಮದ ಕವಿತಾ ಮತ್ತು ಪ್ರಸನ್ನ ದಂಪತಿ ಪುತ್ರರಾಗಿದ್ದು, ಉದಯೋನ್ಮುಖ ಕ್ರೀಡಾಪಟುವಾಗಿ ಹೊರ ಹೊಮ್ಮುತ್ತಿದ್ದು, ಗ್ರಾಮ ಹಾಗೂ ಜಿಲ್ಲೆಗೆ ಕೀರ್ತಿ ತರುತ್ತಿದ್ದಾರೆ.