ಚನ್ನಗಿರಿ: ಶಾಲಾ ಕ್ರೀಡಾಕೂಟಗಳಲ್ಲಿ ತೀರ್ಪುಗಾರರು ನ್ಯಾಯಯುತವಾಗಿ ತೀರ್ಪು ನೀಡಬೇಕು. ನಿಮ್ಮ ತೀರ್ಪು ನಿಜವಾದ ಆಟಗಾರರ ಭವಿಷ್ಯ ಬಲಿ ತೆಗೆದುಕೊಳ್ಳಬಾರದು ಎಂದು ಶಾಸಕ ಶಿವಗಂಗಾ ಬಸವರಾಜ್ ತಿಳಿಸಿದರು.
ತಾಲೂಕಿನ ದುರ್ವಿಗೆರೆ ಗ್ರಾಮದಲ್ಲಿ 2023-24ನೇ ಸಾಲಿನ ಗ್ರಾಮಾಂತರ ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟ ಉದ್ಘಾಟಿಸಿ ಬುಧವಾರ ಮಾತನಾಡಿದರು.
ಮಾನಸಿಕ ಮತ್ತು ದೈಹಿಕವಾಗಿ ಸದೃಢರನ್ನಾಗಿ ಮಾಡುವಂತಹ ಶಕ್ತಿ ಕ್ರೀಡೆಯಲ್ಲಿದೆ. ಆಟದಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಭಾಗವಹಿಸುವಿಕೆ ಮುಖ್ಯ. ಇಂದು ಸೋತವರು ಮುಂದೊಂದು ದಿನ ಗೆದ್ದು ಬರುವುದು ನಿಶ್ಚಿತ. ಆಟದಲ್ಲಿ ಶಿಸ್ತು, ಸಮಯಪಾಲನೆ ಮುಖ್ಯ. ಸೋಲು ಗೆಲುವಿನ ಮೆಟ್ಟಿಲು ಇದ್ದಂತೆ. ಸೋತವರಿಗೆ ಅನುಭವ ಅಧಿಕವಾಗಿ ಇರುತ್ತದೆ ಎಂದರು.
ಬಿಇಒ ಜಯಪ್ಪ, ದುರ್ವಿಗೆರೆ ಗ್ರಾಪಂ ಅಧ್ಯಕ್ಷೆ ಎಂ.ಕೆ. ಕಾವ್ಯ, ಎಸ್‌ಡಿಎಂಸಿ ಅಧ್ಯಕ್ಷ ಎಸ್. ತರುಳೇಶ್, ಉಪಾಧ್ಯಕ್ಷೆ ಜಯಶೀಲಬಾಯಿ, ಗ್ರಾಪಂ ಸದಸ್ಯ ಜಿ.ಎಚ್. ಹರೀಶ್, ಟಿ. ಜಗದೀಶ್, ಕಾವ್ಯ, ರೇಣುಕಮ್ಮ, ಯು.ಬಿ. ಮಂಜಪ್ಪ, ಶೇಖರಪ್ಪ, ಎಸ್.ಎಂ. ಶೈಲಜಾ, ಸಬಿಯಬಾನು, ತಿಪ್ಪೇಶ್‌ನಾಯ್ಕ ಇದ್ದರು.