ಮುಧೋಳ ನಗರದಲ್ಲಿ ಸಾರ್ವಜನಿಕ ಶೌಚಾಲಯ ವಿಲ್ಲದ ಕವಿಚಕ್ರವರ್ತಿ ರನ್ನ ಕ್ರೀಡಾಂಗಣ. 
ಜಿಲ್ಲೆ

ಕ್ರೀಡಾಕೂಟಕ್ಕೆ ಬಂದ ವಿದ್ಯಾರ್ಥಿಗಳು, ಶಿಕ್ಷಕರ ಪರದಾಟ

ವೆಂಕಟೇಶ ಗುಡೆಪ್ಪನವರ ಮುಧೋಳ
ಹತ್ತನೇ ಶತಮಾನದಲ್ಲಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ಕೊಟ್ಟ ರತ್ನತ್ರಯ ಕವಿಚಕ್ರವರ್ತಿ ರನ್ನನ ಹೆಸರು ಅಜರಾಮರವಾಗಿರಲಿ ಎಂದು ಇಂದಿನ ಸಚಿವರು ಹಾಗೂ ಮಾಜಿ ಉಪಮುಖ್ಯಮಂತ್ರಿಗಳು ಸಾಕಷ್ಟು ಪರಿಶ್ರಮದಿಂದ ಹಲವಾರು ಕಾರ್ಯಗಳಾಗಿವೆ. ನಗರದಲ್ಲಿ ಕವಿಚಕ್ರವರ್ತಿ ರನ್ನ ಕ್ರೀಡಾಂಗಣ ನಿರ್ಮಾಣವಾಗಿ ಹಲವಾರು ವರ್ಷಗಳಾದರೂ ಒಂದೇ ಒಂದು ಸಾರ್ವಜನಿಕ ಮೂತ್ರಿ, ಶೌಚಗೃಹ ಇಲ್ಲ.

ಈ ಕ್ರೀಡಾಂಗಣದಲ್ಲಿ ಬೃಹತ್ ಸಮಾರಂಭಗಳು, ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಕಾರ್ಯಕ್ರಮಗಳು, ಲಕ್ಷಾಂತರ ಜನರು ಸೇರುವ ರನ್ನ ವೈಭವ ಕಾರ್ಯಕ್ರಮ ಕೂಡ ಇದೇ ಸ್ಥಳದಲ್ಲಿ ನಡೆಯಲಿದೆ. ಲಕ್ಷಾಂತರ ಜನ ಸೇರುವ ಸಮಯದಲ್ಲಿ ಮೊಬೈಲ್ ಮೂತ್ರಿ, ಶೌಚಗೃಹಗಳ ನಿರ್ಮಾಣ ಮಾಡಿ ತಾತ್ಕಾಲಿಕ ಸಮಸ್ಯೆ ಬಗೆಹರಿಸುತ್ತ ಬಂದಿದ್ದಾರೆ.

ಕ್ರೀಡಾ ವಿದ್ಯಾರ್ಥಿಗಳಿಗೆ ತೊಂದರೆ:
ಪ್ರತಿ ವರ್ಷ ತಾಲೂಕಿನ 8 ಕ್ಲಸ್ಟರ್ ಹಾಗೂ ಪ್ರೌಢಶಾಲೆಯ ಎರಡು ಕ್ಲಸ್ಟರ್, ತಾಲೂಕು ಮಟ್ಟದ ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು ಕ್ರೀಡಾಕೂಟಗಳು ಮೈದಾನದಲ್ಲಿ ನಡೆದರೆ ಕ್ರೀಡಾಪಟುಗಳು ದೈಹಿಕ ಬಾಧೆ ತಣಿಸಲು ಒಂದೇ ಒಂದು ಸಾರ್ವಜನಿಕ ಶೌಚಗೃಹ, ಮೂತ್ರಿ ಇಲ್ಲ. ಗಂಡು ಮಕ್ಕಳು ಬಯಲಲ್ಲಿ ಹೇಗೋ ತಮ್ಮಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಆದರೆ, ವಿದ್ಯಾರ್ಥಿನಿಯರು, ಯುವತಿಯರು ಹಾಗೂ ಶಿಕ್ಷಕಿಯರಿಗೆ ಭಾರಿ ತೊಂದರೆಯಾಗುತ್ತಿದೆ. ಈ ನಿಟ್ಟಿನಲ್ಲಿ ಸಾಕಷ್ಟು ಸಲ ಮೌಖಿಕವಾಗಿ ನಗರಸಭೆ, ತಹಸೀಲ್ದಾರರಿಗೆ ಮಾಹಿತಿ ನೀಡಿದರೂ ಯಾವುದೇ ಪರಿಹಾರವಾಗಿಲ್ಲ. ಇಂಥ ಒಂದು ಸಮಸ್ಯೆಯಿಂದ ವಿದ್ಯಾರ್ಥಿನಿಯರು ನೀರು ಕುಡಿಯದೆ ಹಾಗೆಯೇ ಕಾಲ ಕಳೆಯುತ್ತಾರೆ.
ಸಾರ್ವಜನಿಕರಿಗೂ ತೊಂದರೆ:
ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ನೂರಾರು ಸಂಖ್ಯೆಯ ಮಹಿಳೆಯರು, ಯುವಕರು, ಪುರುಷರು, ವೃದ್ಧರು ಮೈದಾನದಲ್ಲಿ ವಾಯುವಿಹಾರ ಮಾಡುತ್ತಾರೆ. ಸಕ್ಕರೆ ಕಾಯಿಲೆ ಇರುವ ಪುರುಷ ರೋಗಿಗಳಂತೂ ಬಯಲಲ್ಲೋ, ಗೋಡೆಗೆ ಮೂತ್ರ ವಿಸರ್ಜನೆ ಮಾಡಿ ದೇಹಬಾಧೆ ತೀರಿಸಿಕೊಳ್ಳುತ್ತಾರೆ. ಮಹಿಳಾ ರೋಗಿಗಳ ಕಷ್ಟ ದೇವರೇ ಬಲ್ಲ. ಇನ್ನು ಕುಡಿಯುವ ನೀರಿನ ಸೌಲಭ್ಯವೂ ಕ್ರೀಡಾಂಗಣದಲ್ಲಿಲ್ಲ. ಕ್ರೀಡಾಕೂಟ ಏರ್ಪಡಿಸಿದವರು ಟ್ಯಾಂಕರ್ ವ್ಯವಸ್ಥೆ ಮಾಡಬೇಕು. ಇತ್ತೀಚೆಗೆ ಮತ್ತೆ ಹೊಸ ಯೋಜನೆ ಮೂಲಕ ರನ್ನ ಕ್ರೀಡಾಂಗಣದ ಅಭಿವೃದ್ದಿಗೆ ಇಂದಿನ ಜಿಲ್ಲಾ ಉಸ್ತುವಾರಿ ಸಚಿವರು ಮುಂದಾಗಿದ್ದು, ಇದರಲ್ಲಿ ಶೌಚಗೃಹ ವ್ಯವಸ್ಥೆ ಮಾಡಿದರೆ ಅನುಕೂಲವಾಗಬಹುದು.

ಪೋಟೋ;ಎಮ್ ಡಿ ಎಲ್-23-2: ಮುಧೋಳ ನಗರದಲ್ಲಿ ಸಾರ್ವಜನಿಕ ಶೌಚಾಲಯ ವಿಲ್ಲದ ಕವಿಚಕ್ರವರ್ತಿ ರನ್ನ ಕ್ರೀಡಾಂಗಣ.