ಹುಣಸೂರು ನಗರದ ಸಂತಜೋಸೆಫರ ಪ್ರೌಢಶಾಲೆಯಲ್ಲಿ ಸೋಮವಾರ ಶಾಸಕ ಜಿ.ಡಿ.ಹರೀಶ್‌ಗೌಡ ಕ್ರೀಡಾಜ್ಯೋತಿಯನ್ನು ಸ್ವೀಕರಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಕೆ.ಜೆ.ಚಂದ್ರಶೇಖರ್, ಎಚ್.ಎಸ್.ಲೋಕೇಶ್, ಸಿಸ್ಟರ್ ಡೈಸಿ ಡಿಕೋಸ್ತ ಇತರರಿದ್ದಾರೆ. 
ಜಿಲ್ಲೆ

ಕ್ರೀಡಾಕೂಟಕ್ಕೆ ಚಾಲನೆ

ಹುಣಸೂರು: ಹುಣಸೂರು ನಗರ ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟಕ್ಕೆ ಶಾಸಕ ಜಿ.ಡಿ. ಹರೀಶ್‌ಗೌಡ ಕ್ರೀಡಾ ಜ್ಯೋತಿಯನ್ನು ಸ್ವೀಕರಿಸುವ ಮೂಲಕ ಚಾಲನೆ ನೀಡಿದರು.

ನಗರದ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಕ್ರೀಡಾಕೂಟಕ್ಕೆ ಕ್ರೀಡಾಪಟುಗಳಿಂದ ಕ್ರೀಡಾಜ್ಯೋತಿಯನ್ನು ಸ್ವೀಕರಿಸಿ ಮಾತನಾಡಿದ ಅವರು, ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯಕ್ಕಾಗಿ ಕ್ರೀಡೆ ಅಗತ್ಯ. ವಿದ್ಯಾರ್ಥಿಗಳು ವ್ಯಾಸಂಗದೊಂದಿಗೆ ಕ್ರೀಡೆ, ಸಾಂಸ್ಕೃತಿಕ ಚಟವಟಿಕೆಯಲ್ಲಿ ತೊಡಗಿಸಿಕೊಂಡು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಬೇಕು. ಇದಕ್ಕೆ ಅಗತ್ಯವಿರುವ ಸಹಕಾರ ಸಿಗಲಿದೆ ಎಂದರು.

ಕ್ರೀಡಾಕೂಟಗಳು ವಿದ್ಯಾರ್ಥಿಗಳಿಗೆ ಹೊಸ ಸ್ನೇಹಿತರ ಪರಿಚಯ, ಕ್ರೀಡಾ ಮನೋಭಾವದ ಅನುಭವ ನೀಡುತ್ತದೆ. ಸೋಲಬಾರದು ಅಥವಾ ಗೆಲ್ಲಲೇಬೇಕೆಂಬ ಮನೋಭಾವ ಬೇಡ. ಶಿಕ್ಷಕರು ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರತರಲು ಪ್ರತಿದಿನ ಒಂದು ಗಂಟೆಯಾದರೂ ಮೀಸಲಿಡುವುದು ಅಗತ್ಯ. ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳು ಕೂಡ ಜೀವನದಲ್ಲಿ ಮುಖ್ಯ ಎನ್ನುವುದನ್ನು ಮರೆಯದಿರಿ ಎಂದರು.

ಸಂತ ಜೋಸೆಫರ ವಿದ್ಯಾಸಂಸ್ಥೆ ಸಂಚಾಲಕಿ ಸಿಸ್ಟರ್ ಡೈಸಿ ಡಿಕೋಸ್ತ ಪ್ರಾಸ್ತಾವಿಕವಾಗಿ ಮಾತನಾಡಿದರು. ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಜೆ.ಚಂದ್ರಶೇಖರ್, ತಾಲೂಕು ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ಕೆ.ಎಸ್.ಮೋಹನ್‌ರಾಜ್, ಪ್ರೌಢಶಾಲೆ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಟಿ.ಹರೀಶ್, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಸ್.ಗೋವಿಂದೇಗೌಡ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಎಚ್.ಎಸ್.ಲೋಕೇಶ್ ಸೇರಿದಂತೆ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ 12 ಶಾಲೆಗಳ ಮುಖ್ಯಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು, ತರಬೇತುದಾರರು ಇದ್ದರು.