ಶೃಂಗೇರಿ ಜೆಸಿಬಿಎಂ ಕಾಲೇಜಿನ ಒಳ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ 14 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಜ್ಞಾನಭಾರತಿ ವಿದ್ಯಾಕೇಂದ್ರ ಪ್ರಥಮ ಸ್ಥಾನ ಪಡೆಯಿತು. ಸತೀಶ್, ಶಂಕರನಾರಾಯಣ್, ಬಿ.ಸಿ.ಪಾಟೀಲ್, ಡಾ. ಎಂ.ಸ್ವಾಮಿ ಇದ್ದರು. 
ಜಿಲ್ಲೆ

ಕ್ರೀಡಾಕೂಟ ನಡೆಸಲು ಪೂರಕ ವಾತಾವರಣ ಸೃಷ್ಟಿಸಿ

ಶೃಂಗೇರಿ: ಕ್ರೀಡಾಕೂಟ ನಡೆಸಲು ಪೂರಕ ವಾತಾವರಣವಿದ್ದಾಗ ಕ್ರೀಡಾಪಟುಗಳಲ್ಲಿ ಆಟವಾಡಲು ಆಸಕ್ತಿ ಹುಟ್ಟುತ್ತದೆ ಎಂದು ಜೆಸಿಬಿಎಂ ಕಾಲೇಜಿನ ಪ್ರಾಚಾರ್ಯ ಡಾ. ಸ್ವಾಮಿ ಹೇಳಿದರು.

ಜೆಸಿಬಿಎಂ ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ 17 ವರ್ಷದ ಒಳಗಿನ ವಯೋಮಾನದ ಜಿಲ್ಲಾ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ದಾನಿ ಸಂಪತ್‌ಕುಮಾರ್ ಕಾಲೇಜಿನಲ್ಲಿ ನಿರ್ಮಿಸಿಕೊಟ್ಟಿರುವ ಒಳಾಂಗಣ ಕ್ರೀಡಾಂಗಣದಿಂದ ಇಲ್ಲಿ ಪಂದ್ಯಾವಳಿ ನಡೆಸಲು ಸಾಧ್ಯವಾಗಿದೆ. ಕಾಲೇಜಿನ ವಿದ್ಯಾರ್ಥಿಗಳಿಗೂ ಒಳಾಂಗಣ ಕ್ರೀಡಾಂಗಣ ಉಪಯೋಗವಾಗುತ್ತಿದ್ದು, ಮಲೆನಾಡಿನಲ್ಲಿ ಮಳೆ ಇದ್ದಾಗಲೂ ಕ್ರೀಡಾ ಚಟುವಟಿಕೆಗೆ ಯಾವುದೇ ತೊಂದರೆಯಾಗುತ್ತಿಲ್ಲ. ಇದರಿಂದ ವರ್ಷವಿಡೀ ಕ್ರೀಡಾ ಚಟುವಟಿಕೆಗೆ ಸಹಕಾರಿಯಾಗಿದೆ ಎಂದರು.

ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಎಸ್.ಸಿದ್ದರಾಜು ಮಾತನಾಡಿ, ಜಿಲ್ಲಾ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿ ಆಯೋಜಿಸಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಪಂದ್ಯಾವಳಿಯಲ್ಲಿ ಯಾವುದೇ ಗೊಂದಲ ಉಂಟಾಗದಂತೆ ಕ್ರೀಡಾಪಟುಗಳು ಸಹಕಾರ ನೀಡಬೇಕು ಎಂದರು.

ತಾಪಂ ಇಒ ಸುದೀಪ್ ಕ್ರೀಡಾಕೂಟ ಉದ್ಘಾಟಿಸಿದರು. ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಸುರೇಶ್ ಮತ್ತು ಬಾಬಾಗೌಡ ಪಾಟೀಲ್ ಅವರನ್ನು ಗೌರವಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ವರಲಕ್ಷ್ಮೀ, ಪಿಯು ವಿಭಾಗದ ಉಪ ಪ್ರಾಚಾರ್ಯ ಎ.ಜಿ.ಪ್ರಶಾಂತ್, ದಾನಿ ಸಂಪತ್‌ಕುಮಾರ್, ಪಪಂ ಅಧ್ಯಕ್ಷ ವೇಣುಗೋಪಾಲ್, ಉಪಾಧ್ಯಕ್ಷ ಎಂ.ಎಲ್.ಪ್ರಕಾಶ್, ಬಿಆರ್‌ಸಿ ಕ್ಷೇತ್ರ ಸಮನ್ವಯಾಧಿಕಾರಿ ಗಂಗಾಧರಪ್ಪ, ಜ್ಞಾನಭಾರತಿ ವಿದ್ಯಾಕೇಂದ್ರ ಆಡಳಿತ ಮಂಡಳಿ ಪದಾಧಿಕಾರಿ ಎ.ಎಸ್.ನಯನ ಇತರರಿದ್ದರು.