ಜಿಲ್ಲೆ

ಕ್ರೀಡಾಂಗಣದಲ್ಲಿ ಕಾಮಗಾರಿ ಅನುಷ್ಠಾನಕ್ಕೆ ಡಿಸಿ ಸೂಚನೆ

ಚಾಮರಾಜನಗರ: ಜಿಲ್ಲಾ ಕ್ರೀಡಾಂಗಣ ಸಮಿತಿ ಸಭೆಯು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್ ಉಪಸ್ಥಿತಿಯಲ್ಲಿ ಇತ್ತೀಚೆಗೆ ಸಂತೇಮರಹಳ್ಳಿಯಲ್ಲಿರುವ ಆರ್ಚರಿ ಮತ್ತು ಫೆನ್ಸಿಂಗ್ ಕ್ರೀಡಾ ವಸತಿ ನಿಲಯದಲ್ಲಿ ನಡೆಯಿತು.

ಕಳೆದ ಏಪ್ರಿಲ್‌ನಲ್ಲಿ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ಚಾಮರಾಜನಗರ ಜಿಲ್ಲಾ ಕೇಂದ್ರದ ಡಾ. ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣಕ್ಕೆ ಅನುಮೋದನೆಗೊಂಡ ಕಾಮಗಾರಿಗಳಾದ ವಾಲಿಬಾಲ್, ಖೋ-ಖೋ, ಕಬಡ್ಡಿ, ನೆಟ್‌ಬಾಲ್, ಬಾಸ್ಕೆಟ್‌ಬಾಲ್, ಲಾನ್ ಟೆನಿಸ್, ನಿರ್ಮಾಣಕ್ಕೆ ಅಗತ್ಯವಾದ ಸ್ಥಳಾವಕಾಶವನ್ನು ಕ್ರೀಡಾಂಗಣದಲ್ಲಿ ಅಣಿಗೊಳಿಸಲು ತೀರ್ಮಾನಿಸಲಾಯಿತು.

ನೂತನವಾಗಿ 50ಮೀ ರೈಸಿಂಗ್ ಪೂಲ್, 25ಮೀ ಪ್ರಾಕ್ಟಿಸ್ ಪೂಲ್ ಮತ್ತು ಬೇಬಿ ಪೂಲ್ ಒಳಗೊಂಡಂತೆ ಒಳಾಂಗಣ ಅಕ್ವೆಟಿಕ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಸುಸಜ್ಜಿತವಾಗಿ ನಿರ್ಮಿಸಲು ಹಾಗೂ ಅಪೂರ್ಣಗೊಂಡ ಪೆವಿಲಿಯನ್, ಪಶ್ಚಿಮ ಭಾಗದಲ್ಲಿ ಸುತ್ತುಗೋಡೆ ಇನ್ನಿತರ ಕಾಮಗಾರಿಗಳನ್ನು ಪೂರ್ಣಗೊಳಿಸಲು ತೀರ್ಮಾನಿಸಲಾಯಿತು. ಸಂತೇಮರಹಳ್ಳಿಯ ಆರ್ಚರಿ ಮತ್ತು ಫೆನ್ಸಿಂಗ್ ಕ್ರೀಡಾ ವಸತಿನಿಲಯಕ್ಕೆ ಪರಿಶಿಷ್ಟ ಪಂಗಡದ ಬಾಲಕಿಯರಿಗೆ ಪ್ರವೇಶಾತಿ ನೀಡುವ ಅನುಮತಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲು ತೀರ್ಮಾನಿಸಲಾಯಿತು.

ಕೊಳ್ಳೇಗಾಲ ತಾಲೂಕು ಕ್ರೀಡಾಂಗಣದಲ್ಲಿ ಅಪೂರ್ಣಗೊಂಡಿರುವ ಒಳ ಕ್ರೀಡಾಂಗಣ ಮತ್ತು ಜಿಮ್ ಕಟ್ಟಡ ಪೂರ್ಣಗೊಳಿಸಲು ಅನುದಾನ ಬಿಡುಗಡೆಗಾಗಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲು ಹಾಗೂ ನೂತನವಾಗಿ ಬಾಸ್ಕೆಟ್ ಬಾಲ್ ಅಂಕಣವನ್ನು ನಿಗಧಿಪಡಿಸಿದ ಸ್ಥಳದಲ್ಲೇ ನಿರ್ಮಾಣ ಮಾಡಲು ನಿರ್ಣಯಿಸಲಾಯಿತು. ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿರುವ ಮತ್ತು ಸಂತೇಮರಹಳ್ಳಿಯಲ್ಲಿರುವ ಕ್ರೀಡಾ ವಸತಿ ನಿಲಯದ ಕ್ರೀಡಾಪಟುಗಳಿಗೆ ಉತ್ತಮ ಗುಣಮಟ್ಟದ ಊಟ, ಉಪಾಹಾರ, ವೈಜ್ಞಾನಿಕ ತರಬೇತಿ ಸೇರಿದಂತೆ ಎಲ್ಲ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಿ ಕ್ರೀಡಾಪಟುಗಳ ಮುಂದಿನ ಭವಿಷ್ಯ ರೂಪಿಸಲು ಅಧಿಕಾರಿಗಳು, ತರಬೇತುದಾರರು ಶ್ರಮಿಸುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಸೂಚಿಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಸುರೇಶ್, ಇತರ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.