ಬಾಳೆಹೊನ್ನೂರು: ಬಿ.ಕಣಬೂರು ಗ್ರಾಪಂ ಮೆಣಸುಕೊಡಿಗೆ ಭಗತ್ ಸಿಂಗ್ ಕ್ರೀಡಾಂಗಣ ಅಭಿವೃದ್ಧಿಗೆ ಗ್ರಾಪಂನಿಂದ 1.50 ಲಕ್ಷ ರೂ. ಅನುದಾನ ನೀಡಲಾಗುವುದು ಎಂದು ಗ್ರಾಪಂ ಅಧ್ಯಕ್ಷ ರವಿಚಂದ್ರ ಭರವಸೆ ನೀಡಿದರು.
ಮೆಣಸುಕೊಡಿಗೆ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಸಮುತ್ಕರ್ಷ ತಂಡ ಆಯೋಜಿಸಿದ್ದ ಎರಡನೇ ಆವೃತ್ತಿಯ ಅಯೋಧ್ಯ ಪ್ರೀಮಿಯರ್ ಲೀಗ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಕ್ರೀಡಾಂಗಣ ಅಭಿವೃದ್ಧಿಗೆ ಒಂದು ವಾರದಲ್ಲಿ ಕ್ರಿಯಾ ಯೋಜನೆ ತಯಾರಿಸಿ ಅನುದಾನ ನೀಡಲಾಗುವುದು ಎಂದರು.
ಶಾಸಕರ ಅನುದಾನದಲ್ಲಿ ಕಂಚಿಕೊಡಿಗೆ ರಸ್ತೆ ಅಭಿವೃದ್ಧಿಗೆ 10 ಲಕ್ಷ, ಅಕ್ಷರನಗರದ ವಿವಿಧ ಅಭಿವೃದ್ಧಿ ಕಾರ್ಯಕ್ಕೆ 60 ಲಕ್ಷ, ಹಲಸೂರು ರಸ್ತೆಗೆ 1 ಕೋಟಿ, ಕಡ್ಲೇಮಕ್ಕಿ, ಮಲಯಾಳಿ ಕಾಲನಿ ರಸ್ತೆ ಅಭಿವೃದ್ಧಿಗೆ 1 ಕೋಟಿ ಅನುದಾನ ತರಲಾಗಿದೆ. ಪಟ್ಟಣದ ಮುಖ್ಯರಸ್ತೆಗೆ 35 ಲಕ್ಷ ವೆಚ್ಚದಲ್ಲಿ ಬೀದಿ ದೀಪಗಳ ಅಳವಡಿಸಲಾಗಿದೆ. ಪಟ್ಟಣದಲ್ಲಿ ಪೊಲೀಸ್ ಇಲಾಖೆ ಸಹಕಾರ ಪಡೆದು ಸುಗಮ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಪಾರ್ಕಿಂಗ್ ವ್ಯವಸ್ಥೆಯ ಬೋರ್ಡ್‌ಗಳಿಗೆ ಗ್ರಾಪಂನಿಂದ 2 ಲಕ್ಷ ರೂ. ವ್ಯಯಿಸಲಾಗಿದೆ ಎಂದರು.
ಕಾಫಿ ಮಂಡಳಿ ಸದಸ್ಯ ಭಾಸ್ಕರ್ ವೆನಿಲ್ಲಾ ಮಾತನಾಡಿ, ಮೆಣಸುಕೊಡಿಗೆಯಲ್ಲಿ ಸಣ್ಣ ಕ್ರೀಡಾಂಗಣದಲ್ಲಿ ಯುವಕರು ಪಂದ್ಯಾವಳಿ ಆಯೋಜಿಸಿರುವುದು ಶ್ಲಾಘನೀಯ. ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಬೇಕಿರುವುದು ಎಲ್ಲರ ಕರ್ತವ್ಯ ಎಂದರು.
ಗ್ರಾಪಂ ಸದಸ್ಯ ಬಿ.ಜಗದೀಶ್ಚಂದ್ರ ಮಾತನಾಡಿ, ಬಾಳೆಹೊನ್ನೂರು ವ್ಯಾಪ್ತಿಯ ವಿವಿಧ ಕ್ರೀಡಾಂಗಣಗಳ ಅಭಿವೃದ್ಧಿ ಹಾಗೂ ಕ್ರೀಡಾಪಟುಗಳ ಪ್ರೋತ್ಸಾಹಕ್ಕೂ ಗ್ರಾಪಂ ಸದಾ ಮುಂದೆ ನಿಲ್ಲಬೇಕು ಎಂದರು.
ಅಯೋಧ್ಯ ಕಪ್ ಪಂದ್ಯಾವಳಿಯಲ್ಲಿ ಭವಿಷ್ ಕ್ರಿಕೆಟರ್ಸ್ ಪ್ರಥಮ, ಆಯುಶ್ ಕ್ರಿಕೆಟರ್ಸ್ ದ್ವಿತೀಯ, ಎಂ.ಎಸ್.ಎಫ್ ಕ್ರಿಕೆಟರ್ಸ್ ತೃತೀಯ, ದಶರಥ ಕ್ರಿಕೆಟರ್ಸ್ ಚತುರ್ಥ ಸ್ಥಾನ ಪಡೆದವು.
ಪಂದ್ಯಾವಳಿ ಆಯೋಜಕ ರಕ್ಷಿತ್ ಆಚಾರ್ಯ, ಭಗತ್ ಸಿಂಗ್ ಸಂಘದ ಅಧ್ಯಕ್ಷ ಕೃಷ್ಣಪ್ಪ, ಬಿಜೆಪಿ ಮುಖಂಡರಾದ ಮಂಜು ಶೆಟ್ಟಿ, ಎಂ.ಜಿ.ಪ್ರವೀಣ್, ಸತೀಶ್ ಕೇಶವತ್ತಿ, ಅರುಣ್ ಆಚಾರ್ಯ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಎಸ್.ಸಚಿನ್‌ಕುಮಾರ್, ಕಾರ್ಯದರ್ಶಿ ನಾಗರಾಜ ಭಟ್, ಪ್ರಮುಖರಾದ ಸುಲೋಚನಾ, ಜೆಸ್ಸಿ ಲೋಬೋ, ಅರವಿಂದ್ ಇತರರಿದ್ದರು.