ಡಿ.ಎಂ.ಮಹೇಶ್, ದಾವಣಗೆರೆ : ದೂರದ ಕಜಕ್‌ಸ್ತಾನ್ ರಾಷ್ಟ್ರದ ಅಲ್ಮಟಿಯಲ್ಲಿ 2023ನೇ ಸಾಲಿನ ವಿಶ್ವ ಪ್ಯಾರಾ ವಾಲಿಬಾಲ್ (ಏಷ್ಯನ್ ವಲಯ) ಚಾಂಪಿಯನ್‌ಶಿಪ್ ನಡೆಯಲಿದೆ. ಕರ್ನಾಟಕದಿಂದ ಭಾರತವನ್ನು ಪ್ರತಿನಿಧಿಸುತ್ತಿರುವ ಮೂವರು ಯುವತಿಯರ ಪೈಕಿ ಒಬ್ಬರಾದ ದಾವಣಗೆರೆ ಜಿಲ್ಲೆಯ ಎನ್.ರೂಪಾ, ಅಲ್ಲಿಗೆ ತೆರಳಲು ತಗಲುವ ವೆಚ್ಚ ಹೊಂದಿಸಲು ಹೆಣಗಾಟ ನಡೆಸುತ್ತಿದ್ದಾರೆ!
ಏರ್‌ಟಿಕೆಟ್, ವೀಸಾ, ವಸತಿ ಹಾಗೂ ಇತರೆ ವೆಚ್ಚವಾಗಿ 2.15 ಲಕ್ಷ ರೂ. ತೆರಬೇಕಿದೆ. ಇದಕ್ಕಾಗಿ ವಾಲಿಬಾಲ್ ಆಡುವ ಕೈಗಳು ಕಳೆದ ಮೂರು ತಿಂಗಳಿಂದ ಬೇಡುತ್ತಲಿವೆ, ಊರೂರು ಸುತ್ತಿ ಅಲ್ಲಿನ ಜನಪ್ರತಿನಿಧಿಗಳು, ರಾಜಕೀಯ ಮುಖಂಡರು, ದಾನಿಗಳು, ಸಂಘ ಸಂಸ್ಥೆಗಳಲ್ಲಿ ಬೇಡುತ್ತಿದ್ದಾರೆ. ಆದರೆ ಕೂಡಿಟ್ಟ ಹಾಗೂ ಸಂಗ್ರಹಿಸಿದ್ದೂ ಸೇರಿ ಸದ್ಯಕ್ಕಿರುವ ಹಣ 30 ಸಾವಿರ ರೂ. ಮಾತ್ರ!
ಹರಿಹರ ತಾಲೂಕು ಹಳೆ ಹರ್ಲಾಪುರ ವಾಸಿ ರೂಪಾ, ಜನ್ಮತಃ ಪೋಲಿಯೋ ಬಾಧಿತೆಯಾಗಿದ್ದು ಎಡಗಾಲು ಸ್ವಾಧೀನ ಕಳೆದುಕೊಂಡಿದ್ದಾರೆ. ಅಲ್ಲಿಯೇ ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆಯಾಗಿ ವಿಕಲಾಂಗರ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲಿ ಸಿಗುವ 9 ಸಾವಿರ ರೂ. ವೇತನ ಹಾಗೂ ವಿಕಲಾಂಗರ ಮಾಸಾಶನ ನಂಬಿ ಬದುಕುತ್ತಿದ್ದಾರೆ. ಪತಿ ಮೇಘರಾಜ್ ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕಿದ್ದಾರೆ. ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ.
ಏಳು ವರ್ಷದಿಂದ ಕ್ರೀಡೆಯಲ್ಲಿ ತೊಡಗಿಸಿಕೊಂಡಿರುವ ರೂಪಾ, ಆರಂಭದಲ್ಲಿ ವ್ಹೀಲ್‌ಚೇರ್‌ನ ಬಾಸ್ಕೆಟ್‌ಬಾಲ್ ಕ್ರೀಡೆಯಲ್ಲಿ ಆಸಕ್ತಿ ವಹಿಸಿದ್ದರು. ತದನಂತರ ಕುಳಿತು ಆಡುವ ವಾಲಿಬಾಲ್ ಕ್ರೀಡೆಯತ್ತ ಗಮನ ಹೊರಳಿತು. ಅಲ್ಲಿಂದ ಇದುವರೆಗೂ ಕ್ರೀಡಾಸ್ಫೂರ್ತಿ ಮರೆತಿಲ್ಲ.
2018 ಮತ್ತು ಕಳೆದ ವರ್ಷ ತಮಿಳುನಾಡು, 2021ರಲ್ಲಿ ನವದೆಹಲಿಯಲ್ಲಿ ನಡೆದಿದ್ದ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಇವರಿದ್ದ ರಾಜ್ಯ ತಂಡ ದ್ವಿತೀಯ ಸ್ಥಾನ ಪಡೆದಿತ್ತು. ಮಂಡ್ಯದಲ್ಲಿ 2019ರಲ್ಲಿ ಆಯೋಜಿಸಿದ್ದ ದಕ್ಷಿಣ ವಲಯ ಹಿರಿಯರ ಚಾಂಪಿಯನ್‌ಶಿಪ್‌ನಲ್ಲೂ ಪ್ರಥಮ ಸ್ಥಾನ ಗಳಿಸಿತ್ತು. ಇದೀಗ ಪ್ಯಾರಾಲಿಂಪಿಕ್‌ವಾಲಿಬಾಲ್ ಫೆಡರೇಷನ್ ಆಫ್ ಇಂಡಿಯಾ ನಡೆಸುತ್ತಿರುವ ಅಂತಾರಾಷ್ಟ್ರೀಯ ಪ್ಯಾರಾ ವಾಲಿಬಾಲ್ ಚಾಂಪಿಯನ್‌ಶಿಪ್‌ಗಾಗಿ ರೂಪಾ, ಬೆಂಗಳೂರಲ್ಲಿ 20 ದಿನಗಳ ಕಾಲ ತರಬೇತಿ ಪಡೆದು ಬಂದಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಥಾನ ಗೆದ್ದರೆ ಸ್ಥಳೀಯ ಮಟ್ಟದಲ್ಲೂ ವಿಕಲಾಂಗರಿಗೆ ಈ ಕ್ರೀಡೆ ಕಲಿಸುವ ಅವಕಾಶ ದಕ್ಕಲಿದೆ. ಮುಖ್ಯವಾಗಿ ವಿಕಲಾಂಗರ ಕೋಟಾದಡಿ ಸರ್ಕಾರಿ ನೌಕರಿ ಸಿಗುವ ಸಾಧ್ಯತೆ ಇದೆ ಎನ್ನುವ ರೂಪಾ, ಅಂತಾರಾಷ್ಟ್ರೀಯ ಮಾತ್ರವಲ್ಲದೆ ಇದೇ ವರ್ಷದಲ್ಲಿ ನಡೆಯಲಿರುವ ವಿಶ್ವಕಪ್ ವಾಲಿಬಾಲ್‌ನಲ್ಲೂ ಭಾಗವಹಿಸುವ ಇರಾದೆ ಹೊಂದಿದ್ದಾರೆ.
ಹಾಸನ ಜಿಲ್ಲೆಯ ಕಮಲಾಕ್ಷಿ, ಬೆಂಗಳೂರು ಆನೆಕಲ್‌ನ ಸರಸ್ವತಿ ಅವರೊಂದಿಗೆ ರೂಪಾ ಕೂಡ ರಾಷ್ಟ್ರ ಪ್ರತಿನಿಧಿಸುತ್ತಿದ್ದಾರೆ. ಜೂ. 28ರಂದು ಹಣ ಹೊಂದಿಸಿಕೊಂಡು ಜಿಲ್ಲೆಯಿಂದ ತೆರಳಬೇಕಿದೆ. ಇದಕ್ಕೆ ಆರು ದಿನ ಮಾತ್ರ ಬಾಕಿ ಇದೆ. ಆರ್ಥಿಕವಾಗಿ ಸಬಲರಲ್ಲದ ಕುಟುಂಬದ ರೂಪಾ, ಹಣ ಹೊಂದಿಸದಿದ್ದರೆ ವಾಲಿಬಾಲ್ ಆಡುವ ಕನಸು ಕಮರಿ ಹೋಗುವ ಆತಂಕದಲ್ಲಿದ್ದಾರೆ.
ಆರ್ಥಿಕ ನೆರವು ನೀಡಲು ಬಯಸುವ ಆಸಕ್ತರು ರೂಪಾ ಎನ್., ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಹರಿಹರ ಪಿಬಿ ರಸ್ತೆ ಶಾಖೆ,
ಬ್ಯಾಂಕ್ ಖಾತೆ ಸಂ. 31594501306, ಐಎಫ್‌ಎಸ್‌ಸಿ ನಂ. ಎಸ್‌ಬಿಐಎನ್0040111 ಇಲ್ಲಿಗೆ ಹಣ ಸಲ್ಲಿಸಬಹುದು. ಅಥವಾ ಮೊಬೈಲ್ ಸಂಖ್ಯೆ 95386-69086 ಇಲ್ಲಿಗೆ ಸಂಪರ್ಕಿಸಬಹುದು.
--
ಕೋಟ್
ಕ್ರೀಡೆಗಳಲ್ಲಿ ಹೆಣ್ಣುಮಕ್ಕಳು ಭಾಗಿಯಾಗಲು ಹಿಂಜರಿಯುತ್ತಾರೆ. ಆದರೆ ನನಗೆ ಇಲ್ಲಿಯೇ ಏನನ್ನಾದರೂ ಸಾಧನೆ ಮಾಡಬೇಕೆಂಬ ಆಸೆ ಇದೆ. ದಾನಿಗಳು ಆರ್ಥಿಕ ನೆರವು ನೀಡಬೇಕಿದೆ.
ಎನ್. ರೂಪಾ,
ಪ್ಯಾರಾ ವಾಲಿಬಾಲ್ ಪಟು.
--