ಜಿಲ್ಲೆ

ಕ್ರೀಡಾ ಮನೋಭಾವನೆ ಬೆಳೆಸಿಕೊಳ್ಳಿ, ಶಾಸಕ ನಿಸರ್ಗ ನಾರಾಯಣಸ್ವಾಮಿ ಸಲಹೆ, ಕಾರಹಳ್ಳಿ ಕೆರೆಯಲ್ಲಿ ಜಲಕ್ರೀಡೆಗೆ ಚಾಲನೆ

ಬೆಂಗಳೂರು ಗ್ರಾಮಾಂತರ: ವಿದ್ಯಾರ್ಥಿ ದಿಸೆಯಿಂದಲೇ ಕ್ರೀಡಾ ಮನೋಭಾವ ಬೆಳೆಸಿಕೊಳ್ಳುವ ಮೂಲಕ ಸಧೃಡ ದೇಹ, ಆರೋಗ್ಯಯುತ ಜೀವನ ನಡೆಸಲು ಮುಂದಾಗಬೇಕು ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.

ವಿಶ್ವ ಯೋಗ ದಿನಾಚರಣೆ ಮತ್ತು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದೊಂದಿಗೆ ದೇವನಹಳ್ಳಿಯ ಕಾರಹಳ್ಳಿ ಕೆರೆಯಲ್ಲಿ ಮಂಗಳವಾರ ಆಯೋಜಿಸಿದ್ದ ಜಲ ಕ್ರೀಡೆ ಕಾರ್ಯಕ್ರಮವನ್ನು ಬಲೂನ್ ಹಾರಿಬಿಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಜಲಕ್ರೀಡೆ ಮನಸ್ಸಿಗೆ ವಿಶೇಷವಾದ ಅನುಭವನ ನೀಡುತ್ತದೆ. ಇದೊಂದು ಸಾಹಜ ಕ್ರೀಡೆಯಾಗಿ ಜನಪ್ರಿಯತೆ ಗಳಿಸಿದೆ. ಯಾವುದೇ ಸಾಹಸಮಯ ಕ್ರೀಡೆಯಾದರೂ ಸುರಕ್ಷತೆಗೆ ಆದ್ಯತೆ ನೀಡಬೇಕು. ಮಾರ್ಗದರ್ಶನವಿಲ್ಲದೆ ಇಂಥ ಕ್ರೀಡೆಗಳಲ್ಲಿ ಪಾಲ್ಗೊಳ್ಳಬಾರದು ಎಂದು ಎಚ್ಚರಿಕೆ ನೀಡಿದರು.

ವಿಶ್ವ ಯೋಗ ದಿನಾಚರಣೆ ಮತ್ತು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕಾರಹಳ್ಳಿ ಕೆರೆಯಲ್ಲಿ ಜಲಕ್ರೀಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ, ಜನರಲ್ಲಿ ಕ್ರೀಡಾಸಕ್ತಿ ಬೆಳೆಸುವುದು ಇದರ ಉದ್ದೇಶ ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದರು.

ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಅನೇಕ ಯೋಜನೆ ರೂಪಿಸಲಾಗಿದೆ. ಮುಂದಿನ ದಿನಗಳಲ್ಲಿ ಯೋಜನೆಗಳು ಸಾಕಾರಗೊಳ್ಳಲಿವೆ ಎಂದರು.

ಜಲಕ್ರೀಡೆ ಮೋಜು: ಕಾರಹಳ್ಳಿ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಶಾಲಾ ಮಕ್ಕಳು ದೋಣಿ ವಿಹಾರದ ಮೂಲಕ ಜಲಕ್ರೀಡೆಯ ಮೋಜು ಅನುಭವಿಸಿದರು. ಜಿಲ್ಲಾಡಳಿತ ಸಿಬ್ಬಂದಿಯೂ ಪಾಲ್ಗೊಂಡು ಖುಷಿ ಹಂಚಿಕೊಂಡರು. ಎಲ್ಲರಿಗೂ ಲ್ೈಜಾಕೆಟ್ ವಿತರಿಸಿ ಸುರಕ್ಷತಾ ಕ್ರಮಕೈಗೊಳ್ಳಲಾಗಿತ್ತು.