ಚಾಮರಾಜನಗರ: ಕ್ರೀಡಾ ಚಟುವಟಿಕೆ ಒಂದು ದಿನದ ಕಾರ್ಯಕ್ರಮವಾಗದೆ ನಿರಂತರವಾಗಿರಬೇಕು ಎಂದು ಚಾಮರಾಜನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಆರ್.ಗಂಗಾಧರ್ ತಿಳಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಚಾಮರಾಜನಗರದ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಬುಧವಾರ ಆಯೋಜಿಸಲಾಗಿದ್ದ ಅಂತರ ಕಾಲೇಜುಗಳ ಪುರುಷರ ಹಾಗೂ ಮಹಿಳೆಯರ ಕ್ರೀಡಾಕೂಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕ್ರೀಡಾ ಚಟುವಟಿಕೆ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಅವಿಭಾಜ್ಯ ಅಂಗವಾಗಿರಬೇಕು. ಕ್ರೀಡೆ ಮನುಷ್ಯನ ಜೀವನದಲ್ಲಿ ನಿರಂತರವಾಗಿರುವಂತೆ ನೋಡಿಕೊಳ್ಳಬೇಕು. ಕ್ರೀಡೆ ದೈಹಿಕ, ಮಾನಸಿಕ ಸದೃಢತೆಗೆ ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಕ್ರೀಡೆಗೂ ಮಹತ್ವ ನೀಡಬೇಕು. ಚಾಮರಾಜನಗರ ವಿಶ್ವವಿದ್ಯಾಲಯದಲ್ಲಿ ಕ್ರೀಡೆಗೂ ಪ್ರಾಮುಖ್ಯ ನೀಡಲು ದೈಹಿಕ ಶಿಕ್ಷಣ ವಿಭಾಗಕ್ಕೆ ನಿರ್ದೇಶಕರನ್ನು ನೇಮಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಕ್ರೀಡೆಯಲ್ಲದೆ ಎನ್ನೆಸ್ಸೆಸ್ ಹಾಗೂ ಎನ್.ಸಿ.ಸಿ. ಸೇರಿದಂತೆ ಇತರ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡಬೇಕು. ಪ್ರತಿಯೊಬ್ಬರೂ ಉತ್ತಮ ಆರೋಗ್ಯಕ್ಕೆ ಪೂರಕವಾಗುವಂತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ದಿನನಿತ್ಯದ ವ್ಯಾಯಾಮದ ಜತೆಗೆ ಟೆನಿಸ್, ಷಟಲ್‌ಕಾಕ್ ಆಟಗಳನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಮತ್ತು ನಿರ್ದೇಶಕ ಡಾ.ಎಚ್.ಜಿ. ಮಂಜುನಾಥ್ ಮಾತನಾಡಿ, ಪ್ರತಿಯೊಬ್ಬರೂ ದೈಹಿಕ ಹಾಗೂ ಮಾನಸಿಕ ಆರೋಗ್ಯದಿಂದ ಕೂಡಿರಲು ಕ್ರೀಡೆಗಳು ಸಹಕಾರಿಯಾಗಿವೆ. ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಪ್ರತಿದಿನ ಉಲ್ಲಾಸ, ಉತ್ಸಾಹದಿಂದಿರಲು ಸಾಧ್ಯವಾಗಲಿದೆ ಎಂದರು.
ಅಂತಾರಾಷ್ಟ್ರೀಯ ಖೋ ಖೋ ಕ್ರೀಡಾಪಟು ಹಾಗೂ ವಿಶ್ವಕಪ್ ವಿಜೇತೆ ಬಿ. ಚೈತ್ರ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು. ವೇದಿಕೆ ಕಾರ್ಯಕ್ರಮಕ್ಕೂ ಮೊದಲು ವಿ.ವಿ. ಕುಲಪತಿ ಪ್ರೊ. ಎಂ.ಆರ್. ಗಂಗಾಧರ್ ಧ್ವಜಾರೋಹಣ ನೆರವೇರಿಸಿ, ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಕ್ರೀಡಾ ತಂಡಗಳ ಪರಿಚಯ ಮಾಡಿಕೊಂಡರು. ಕುಲಸಚಿವ ಆರ್. ಲೋಕನಾಥ್ ಕ್ರೀಡಾಜ್ಯೋತಿ ಬೆಳಗಿದರು. ಬಳಿಕ ಕ್ರೀಡಾಪಟುಗಳಿಂದ ಆಕರ್ಷಕ ಪಥಸಂಚಲನ ನಡೆಯಿತು.
ಚಾಮರಾಜನಗರ ವಿಶ್ವವಿದ್ಯಾಲಯದ ಕುಲಸಚಿವರಾದ(ಆಡಳಿತ) ಆರ್. ಲೋಕನಾಥ್, ಪರೀಕ್ಷಾಂಗ ಕುಲಸಚಿವ ಡಾ. ವಿ.ಜಿ. ವೆಂಕಟರಮಣ, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಶಾಂತರಾಜು, ವಿ.ವಿ. ಕ್ರೀಡಾ ಸಲಹಾ ಸಮಿತಿ ಸದಸ್ಯ ಜಿ. ಬಂಗಾರು, ಕಾರ್ತಿಕ್ ಇದ್ದರು.
ಕ್ರೀಡೆಗಳನ್ನು ಎಲ್ಲರೂ ಪ್ರೀತಿಸಬೇಕು. ಕ್ರೀಡೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರೆ ಯಶಸ್ಸು ನಮ್ಮನ್ನು ಹುಡುಕಿ ಬರಲಿದೆ. ನಾನು ಸಹ ಸಾಮಾನ್ಯ ಕ್ರೀಡಾಪಟುವಾಗಿದ್ದೆ, ಕ್ರೀಡೆಯನ್ನು ಪ್ರೀತಿಸಿ, ಯಶಸ್ವಿಯಾಗಿದ್ದೇನೆ. ಗಣ್ಯರಿಂದ ಸಾಕಷ್ಟು ಅಭಿನಂದನೆಗಳನ್ನು ಪಡೆದಿದ್ದೇನೆ. ಮುಂದಿನ ದಿನಗಳಲ್ಲಿ ಕ್ರೀಡಾಕ್ಷೇತ್ರಕ್ಕೆ ಹೆಚ್ಚಿನ ಕೊಡುಗೆ ನೀಡುವ ಜವಾಬ್ದಾರಿ ನಮ್ಮ ಮೇಲಿದೆ. ಬಿ.ಚೈತ್ರಾ, ಖೋ-ಖೋ ವಿಶ್ವಕಪ್ ವಿಜೇತ ಕ್ರೀಡಾಪಟು