ನರಗುಂದ: ವಿದ್ಯಾರ್ಥಿಗಳು ಸ್ಪರ್ಧಾ ಮನೋಭಾವದಿಂದ ಕ್ರೀಡಾ ಕೂಟಗಳಲ್ಲಿ ಭಾಗವಹಿಸಬೇಕು. ಕ್ರೀಡೆಯಲ್ಲಿ ಸಾಧನೆ ಮಾಡಿದವರಿಗೆ ಉದ್ಯೋಗ ಸೇರಿ ಎಲ್ಲ ಕ್ಷೇತ್ರಗಳಲ್ಲಿಯೂ ಮಾನ್ಯತೆ ಇದೆ ಎಂದು ಸಿಪಿಐ ಮಲ್ಲಯ್ಯ ಮಠಪತಿ ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ತಾಲೂಕಿನ ಬನಹಟ್ಟಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ 2022- 23ನೇ ಸಾಲಿನ ಗ್ರುಪ್ ಮಟ್ಟದ ಪ್ರೌಢ ಶಾಲೆಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕ್ರೀಡೆಯನ್ನೇ ಜೀವನವನ್ನಾಗಿ ತೆಗೆದುಕೊಂಡಿರುವವರ ಸಂಖ್ಯೆ ನಮ್ಮಲ್ಲಿ ತೀರಾ ವಿರಳ. ಕ್ರೀಡಾ ರಂಗದಲ್ಲಿ ಸಾಧನೆಗೆ ಸಾಕಷ್ಟು ಅವಕಾಶಗಳಿವೆ. ಪಾಲಕರು ಕ್ರೀಡೆಯ ಮಹತ್ವವನ್ನು ಅರಿತುಕೊಳ್ಳಬೇಕಿದೆ. ವಿದ್ಯಾರ್ಥಿಗಳು ಕ್ರೀಡೆಯನ್ನು ಕೇವಲ ಮನೋರಂಜನೆ ಎಂದು ಭಾವಿಸದೆ ಗಂಭೀರವಾಗಿ ಪರಿಗಣಿಸಬೇಕು ಎಂದರು.
ಗ್ರಾಪಂ ಅಧ್ಯಕ್ಷೆ ಕಸ್ತೂರೆವ್ವ ಚೆಲುವಣ್ಣವರ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ಬನಹಟ್ಟಿ ಸರ್ಕಾರಿ ಶಾಲೆಗೆ ಭೂದಾನ ಮಾಡಿರುವ ಬಿ.ಡಿ. ಮಲ್ಲನಗೌಡ್ರ ಕ್ರೀಡಾ ಜ್ಯೋತಿ ಸ್ವೀಕರಿಸಿದರು. ಡಿವೈಎಸ್ಪಿ ಯಲ್ಲಪ್ಪಗೌಡ ಏಗನಗೌಡ್ರ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಚಾರ್ಯ ಕೆ.ಎಂ. ಹುದ್ದಾರ ಅಧ್ಯಕ್ಷತೆ ವಹಿಸಿದ್ದರು. ಎನ್.ಆರ್. ನಿಡಗುಂದಿ, ಆರ್.ಜೆ. ಜುನ್ನಪ್ಪನವರ, ಎಸ್.ಎಸ್. ಪೂಜಾರ, ಸಿ.ಜಿ. ಖಾನಾಪೂರ, ಗ್ರಾಪಂ ಸದಸ್ಯ ಶಿವರಾಜ ಕಲ್ಲಾಪೂರ ಹಾಗೂ ಬನಹಟ್ಟಿ ಸರ್ಕಾರಿ ಪ್ರೌಢ ಶಾಲೆ, ಕಾಲೇಜ್ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ನರಗುಂದ ಪಟ್ಟಣದ ಅಲ್ಲಮಪ್ರಭು, ರೋಟರ್ಯಾಕ್ಟ್, ಲಯನ್ಸ್ ಕನ್ನಡ ಮಾಧ್ಯಮ ಪ್ರೌಢ ಶಾಲೆಗಳು ಹಾಗೂ ತಾಲೂಕಿನ ಅರಿಷಿಣಗೋಡಿ, ಸುರಕೋಡ, ಬನಹಟ್ಟಿ ಸರ್ಕಾರಿ ಪ್ರೌಢ ಶಾಲೆಗಳ ವಿದ್ಯಾರ್ಥಿಗಳು ಗ್ರುಪ್ ಮಟ್ಟದ ಕ್ರೀಡಾ ಕೂಟಗಳಲ್ಲಿ ಪಾಲ್ಗೊಂಡಿದ್ದರು.