ಜಿಲ್ಲೆ

ಕ್ರಿಯಾಯೋಜನೆಗೆ ಸದಸ್ಯರಿಂದ ಒಪ್ಪಿಗೆ

ಚಾಮರಾಜನರ: ನಗರಸಭೆಯ ವಿವಿಧ ವಾರ್ಡ್‌ಗಳಲ್ಲಿ 15ನೇ ಹಣಕಾಸು ಆಯೋಗದ ಅನುದಾನದಡಿ ಕಾಮಗಾರಿಗಳನ್ನು ನಡೆಸಲು ತಯಾರಿಸಿರುವ ಕ್ರಿಯಾಯೋಜನೆಗೆ ಸದಸ್ಯರು ಒಪ್ಪಿಗೆ ಸೂಚಿಸಿದರು.

ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಸುರೇಶ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶೇಷ ಸಾಮಾನ್ಯ ಸಭೆಯಲ್ಲಿ ವಿವಿಧ ಕಾಮಗಾರಿಗಳ ಕ್ರಿಯಾಯೋಜನೆಗೆ ಒಪ್ಪಿಗೆ ಸಿಕ್ಕಿತು. ಘನ ತ್ಯಾಜ್ಯ ವಸ್ತು ನಿರ್ವಹಣಾ ಘಟಕಕ್ಕೆ ಗಾಳೀಪುರ ಕಡೆಯಿಂದ ಹೋಗುವ ರಸ್ತೆಯನ್ನು ಟಿ.ಎಂ.ಬಿ ಬ್ಯಾಂಕ್ ಸರ್ಕಲ್‌ನಿಂದ ಹೊಸ ಹೆಲ್ತ್‌ಕೇರ್ ಆಸ್ಪತ್ರೆವರೆಗೆ ರಸ್ತೆ ಅಭಿವೃದ್ಧಿ ಪಡಿಸುವುದು, ಕರುಮಾರಿಯಮ್ಮ ದೇವಸ್ಥಾನದಿಂದ ಶಾಲೆಯವರೆಗೆ ರಸ್ತೆ ಅಭಿವೃದ್ಧಿ, ಘನತ್ಯಾಜ್ಯ ಘಟಕದ ಬೋರ್‌ವೆಲ್ ಕೊರೆದು ಪೈಪ್‌ಲೈನ್ ಅಳವಡಿಸುವುದು ಮತ್ತು ಮಿನಿ ನೀರು ಸರಬರಾಜು ಘಟಕ ನಿರ್ಮಾಣ ಮಾಡುವುದು, ನಗರಸಭೆ ವ್ಯಾಪ್ತಿಯಲ್ಲಿ ದೊಡ್ಡ ಮಳೆ ನೀರು ಚರಂಡಿಗಳಲ್ಲಿ ಹೂಳು ತೆಗೆಯುವುದು, ತ್ಯಾಜ್ಯ ವಸ್ತುಗಳ ನಿರ್ವಹಣೆಗಾಗಿ ಕಾಂಪ್ಯಾಕ್ಟರ್ ವಾಹನ ಖರೀದಿ, ಘನತ್ಯಾಜ್ಯ ಘಟಕಕ್ಕೆ ಗೇಟ್ ಅಳವಡಿಸುವುದು ಮತ್ತು ಹಾಲಿ ಇರುವ ಜನರೇಟರ್‌ಗೆ ಶೆಲ್ಟರ್ ನಿರ್ಮಾಣ ಮಾಡುವುದಕ್ಕೆ ಸದಸ್ಯರು ಒಪ್ಪಿಗೆ ನೀಡಿದರು.

ನಗರದ 16ನೇ ವಾರ್ಡ್‌ನಲ್ಲಿ ಒಳಚರಂಡಿ ಕಾಮಗಾರಿ, 2ನೇ ವಾರ್ಡ್‌ನ ಸೋಮವಾರಪೇಟೆಯಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ, 4ನೇ ವಾರ್ಡ್‌ನ ಮಸೀದಿ ಮುಂಭಾಗ ಇಂಟರ್‌ಲಾಕ್ ಮತ್ತು ಡೆಕ್ ನಿರ್ಮಾಣ ಕಾಮಗಾರಿ, ವಾಸವಿ ಮಹಲ್ ರಸ್ತೆ ಅಭಿವೃದ್ಧಿ ಕಾಮಗಾರಿ, 10ನೇ ವಾರ್ಡ್‌ನ ಒಂದು ರಸ್ತೆ ಅಭಿವೃದ್ಧಿಗೆ ಕ್ರಿಯಾಯೋಜನೆ ತಯಾರಿಸಲಾಗಿದೆ. ಇದೇ ರೀತಿ ನಗರಸಭೆ ವ್ಯಾಪ್ತಿಯ ವಿವಿಧ ವಾರ್ಡ್‌ಗಳಲ್ಲಿ ಆಯ್ದ ಕಡೆಗಳಲ್ಲಿ ಅಭಿವೃದ್ಧಿ ಕಾಮಗಾರಿ ನಡೆಸಲು ಕ್ರಿಯಾಯೋಜನೆ ತಯಾರಿಸಿ ಸದಸ್ಯರಿಂದ ಒಪ್ಪಿಗೆ ಪಡೆಯಲಾಯಿತು. ಇದೇ ವೇಳೆ ಬೆಂಗಳೂರಿನಲ್ಲಿ ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಕಾಲ್ತುಳಿತಕ್ಕೆ ಸಿಲುಕಿ ಮೃತಪಟ್ಟವರಿಗೆ ಸಂತಾಪ ಸೂಚಿಸಲಾಯಿತು. ಸಭೆಯಲ್ಲಿ ಪೌರಾಯುಕ್ತ ರಾಮದಾಸ್, ಉಪಾಧ್ಯಕ್ಷೆ ಮಮತಾ ಮತ್ತು ಸದಸ್ಯರು ಇದ್ದರು.

ಸಮಸ್ಯೆಗಳನ್ನು ತೆರೆದಿಟ್ಟ ಸದಸ್ಯರು

ಶ್ರೀಚಾಮರಾಜೇಶ್ವರ ರಥೋತ್ಸವಕ್ಕೆ ಪೂರ್ವಭಾವಿ ಸಿದ್ಧತೆಯನ್ನು ಈಗಿನಿಂದಲೇ ಕೈಗೊಳ್ಳಬೇಕೆಂದು ಸುದರ್ಶನ್‌ಗೌಡ ಸಲಹೆ ನೀಡಿದರು. ರಥೋತ್ಸವಕ್ಕೆ 1ತಿಂಗಳು ಬಾಕಿ ಇದೆ. ಉತ್ಸವದಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಳ್ಳುತ್ತಾರೆ. ಹೀಗಾಗಿ ಈಗಿನಿಂದಲೇ ಸಿದ್ಧತೆಯನ್ನು ಆರಂಭಿಸಿ ಎಂದು ತಿಳಿಸಿದರು. ಗಾಯತ್ರಿ ಮಾತನಾಡಿ, ವಾರ್ಡ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ ಎಂದು ತಿಳಿಸಿದರು. ಆರ್.ಪಿ.ನಂಜುಂಡಸ್ವಾಮಿ ಮಾತನಾಡಿ, ರಾಸಮುದ್ರದಲ್ಲಿ ಮನೆಗಳಿಗೆ ನಲ್ಲಿ ನೀರಿನ ಸೌಲಭ್ಯ ಕಲ್ಪಿಸಿಲ್ಲ ಎಂದು ಹೇಳಿದರು. ಪೌರಾಯುಕ್ತ ರಾಮದಾಸ್ ವಿಶೇಷ ಸಭೆಯನ್ನು ಧಾವಂತದಲ್ಲಿ ಮುಗಿಸಿದರು.

ಪ್ರಶ್ನೆ ಮಾಡಿದ ಸದಸ್ಯೆಯರು

ವಿಶೇಷ ಸಭೆ ಮುಗಿಸಿ ತೆರಳುತ್ತಿದ್ದ ಪೌರಾಯುಕ್ತ ರಾಮದಾಸ್‌ಗೆ ನಗರಸಭೆ ಸದಸ್ಯರು ಪ್ರಶ್ನೆಗಳ ಸುರಿಮಳೆಗೈದರು. ಆಶಾ ನಟರಾಜು ಮಾತನಾಡಿ, ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದ ಉದ್ಯಾನ ಅವ್ಯವಸ್ಥೆಯಿಂದ ಕೂಡಿದೆ. ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುತ್ತಿಲ್ಲ. ಉದ್ಯಾನದಲ್ಲಿ ವಾಯುವಿಹಾರಕ್ಕೆ ಬರುವ ಜನರಿಗೆ ಉತ್ತಮವಾದ ವಾತಾವರಣವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕುಮುದಾ ಕೇಶವಮೂರ್ತಿ ಮಾತನಾಡಿ, ಕಸ ವಿಲೇವಾರಿ ಸಮರ್ಪಕವಾಗಿ ಮಾಡುತ್ತಿಲ್ಲ ಎಂದು ದೂರಿದರು.