ಕಾರವಾರ: 15ನೇ ಹಣಕಾಸು ಯೋಜನೆಯ ಅನುದಾನ ಬಳಕೆಗೆ ರೂಪಿಸಿದ ಕ್ರಿಯಾ ಯೋಜನೆ ಅಸಮರ್ಪಕವಾಗಿದೆ ಎಂದು ಜಿಪಂ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಅಧ್ಯಕ್ಷೆ ಜಯಶ್ರೀ ಮೊಗೇರ ಅಧ್ಯಕ್ಷತೆಯಲ್ಲಿ ಸೋಮವಾರ ಆಯೋಜನೆಯಾಗಿದ್ದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರಾದ ಪ್ರದೀಪ ನಾಯಕ, ಶಿವಾನಂದ ಹೆಗಡೆ, ಅಲ್ಬರ್ಟ್ ಡಿಕೋಸ್ಟಾ, ಪುಷ್ಪಾ ನಾಯ್ಕ, ಜಿ.ಎನ್. ಹೆಗಡೆ, ಗಜು ಪೈ ಸೇರಿ ಹಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಕ್ರಿಯಾ ಯೋಜನೆಯನ್ನು ಬದಲಿಸದಿದ್ದರೆ ಸಭೆಯಿಂದ ಹೊರ ನಡೆಯುವುದಾಗಿ ಎಚ್ಚರಿಕೆ ನೀಡಿದರು. ಹೊಸ ಶೌಚಗೃಹ ನಿರ್ವಣ, ಕಸ ವಿಲೇವಾರಿ ಘಟಕ ನಿರ್ವಣಕ್ಕೆ ಅವಕಾಶ ನೀಡಿಲ್ಲ. ಸಣ್ಣ ಪುಟ್ಟ ಬದಲಾವಣೆಗಳನ್ನೂ ಮಾಡುತ್ತಿಲ್ಲ. ಜಿಪಂ ಸಮಿತಿಗೆ ಬೆಲೆಯೇ ಇಲ್ಲದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸ್ಪಷ್ಟನೆ ನೀಡಿದ ಜಿಪಂ ಸಿಇಒ ಎಂ.ರೋಶನ್, 15ನೇ ಹಣಕಾಸು ಯೋಜನೆಯಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಬಿಡುಗಡೆಯಾಗುತ್ತಿದೆ. ಹೆಚ್ಚು ಜನಸಂಖ್ಯೆ ಇರುವ ಗೋಕರ್ಣಕ್ಕೆ 1 ಕೋಟಿ ರೂ. ಬಂದರೆ ಕಡತೋಕ ಗ್ರಾಪಂಗೆ 28 ಲಕ್ಷ ರೂ. ಬಂದಿದೆ. ಜಿಪಂ, ತಾಪಂ ಹಾಗೂ ಗ್ರಾಪಂಗಳಲ್ಲಿ ಅನುಮೋದನೆಯಾಗುವ ಕ್ರಿಯಾ ಯೋಜನೆಗಳನ್ನು ಈಗ ವೆಬ್ಸೈಟ್ನಲ್ಲಿ ಹಾಕಬೇಕಿದೆ. ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯ ಅದಕ್ಕೆ ಅನುಮೋದನೆ ನೀಡುತ್ತದೆ. ತ್ಯಾಜ್ಯ ವಿಲೇವಾರಿ ಘಟಕ, ಚರಂಡಿ ನಿರ್ವಣ, ಶೌಚಗೃಹ ನಿರ್ಮಾಣ ಕಾಮಗಾರಿಗಳಿಗೆ ನಿರ್ಬಂಧಿತ ಅನುದಾನದಲ್ಲಿ ಅವಕಾಶವಿಲ್ಲ. ಅದನ್ನು ಅನಿರ್ಬಂಧಿತ ಅನುದಾನದಲ್ಲಿ ಬಳಕೆ ಮಾಡಿಕೊಳ್ಳಬಹುದು ಎಂದರು.
ಶಾಸಕಿ ರೂಪಾಲಿ ನಾಯ್ಕ, ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಉಪಾಧ್ಯಕ್ಷ ಸಂತೋಷ ರೇಣಕೆ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಚೈತ್ರಾ ಕೊಠಾರಕರ್, ಉಷಾ ಉದಯ ನಾಯ್ಕ, ಬಸವರಾಜ ದೊಡ್ಮನಿ ಇದ್ದರು.
ಮೊದಲ ಬಾರಿ ಉಸ್ತುವಾರಿ ಸಚಿವರ ಭೇಟಿ: ಇತ್ತೀಚಿನ 10 ವರ್ಷಗಳ ಜಿಪಂ ಇತಿಹಾಸದಲ್ಲಿ ಮೊದಲ ಬಾರಿಗೆ ಜಿಲ್ಲಾ ಉಸ್ತುವಾರಿ ಸಚಿವರು ಜಿಪಂ ಸಾಮಾನ್ಯ ಸಭೆಗೆ ಹಾಜರಾಗಿದ್ದರು. ಸಚಿವ ಶಿರರಾಮ ಹೆಬ್ಬಾರ ಮಾತನಾಡಿ, ಮಾರ್ಚ್ ಅಂತ್ಯದಲ್ಲಿ ವಾಪಸಾದ ಅನುದಾನವನ್ನು ಮರಳಿ ಕೊಡಿಸಲಾಗುವುದು. ಕರೊನಾ ಸಂಕಷ್ಟದ ಪರಿಸ್ಥಿತಿಯಲ್ಲಿ ಹೆಚ್ಚಿನ ಅನುದಾನ ಕೊಡುವುದು ಕಷ್ಟ ಎಂದರು. ರಾಜಕೀಯ ಚುನಾವಣೆಗೆ ಮಾತ್ರ ಸೀಮಿತವಾಗಿರಬೇಕು. ಅಧಿಕಾರ ಇದ್ದಾಗ ಪಕ್ಷದ ವ್ಯಾಪ್ತಿ ಮೀರಿ ಬಡವರ, ಜನರ ಪರವಾಗಿ ಕೆಲಸ ಮಾಡಿದಲ್ಲಿ ಜನ ನಮ್ಮನ್ನು ಗುರುತಿಸಲು ಸಾಧ್ಯ ಎಂದು ಸದಸ್ಯರಿಗೆ ಕಿವಿಮಾತು ಹೇಳಿದರು.
ಕಳಪೆ ಡೆಸ್ಕ್ ಪೂರೈಕೆ: ಶಿರಸಿ ಶೈಕ್ಷಣಿಕ ಜಿಲ್ಲೆಯ ಹೈಸ್ಕೂಲ್ಗಳಿಗೆ ಜಿಪಂ ಅನುದಾನದಲ್ಲಿ ಕಳಪೆ ಬೆಂಚ್ ಹಾಗೂ ಡೆಸ್ಕ್ ಪೂರೈಸಲಾಗಿದೆ ಎಂದು ಉಷಾ ಹೆಗಡೆ ಆರೋಪಿಸಿದರು. ಕಳೆದ ಸಭೆಯಲ್ಲೆ ಈ ಕುರಿತು ಚರ್ಚೆ ನಡೆದಿದ್ದರೂ ಇನ್ನೂ ಡೆಸ್ಕ್ ಬದಲಿಸಿಲ್ಲ. ಡೆಸ್ಕ್ ಪೂರೈಕೆ ಬಗ್ಗೆ ಜಿಲ್ಲಾ ಪಂಚಾಯಿತಿ ಸದಸ್ಯರಿಗೆ ಮಾಹಿತಿ ನೀಡಿಲ್ಲ ಎಂದು ಆರೋಪಿಸಿದರು. ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷೆ ಚೈತ್ರಾ ಕೊಠಾರಕರ್, ಡೆಸ್ಕ್ ,ಬೆಂಚ್ ಪೂರೈಕೆ ಅಸಮರ್ಪಕತೆಯ ಕುರಿತು ಕ್ರಮ ವಹಿಸಲು ಡಿಡಿಪಿಐ ಅವರಿಗೆ ಸೂಚಿಸಲಾಗಿದೆ ಎಂದರು. ಸಿಇಒ ರೋಶನ್ ಸ್ಪಷ್ಟನೆ ನೀಡಿ, ಡೆಸ್ಕ್, ಬೆಂಚ್ ಕಳಪೆಯಾಗಿದ್ದರೆ ಅದನ್ನು ಬದಲಿಸುವುದು ಡಿಡಿಪಿಐ ಜವಾಬ್ದಾರಿ ಇನ್ನು 15 ದಿನದಲ್ಲಿ ಕ್ರಮವಾಗಬೇಕು. ನಾನು ಸ್ವತಃ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ ಎಂದು ಸದಸ್ಯರಿಗೆ ಭರವಸೆ ನೀಡಿದರು.
ಯೋಜನೆಯ ಮಾರ್ಗಸೂಚಿಯಂತೆ ನಿರ್ಬಂಧಿತ ಅನುದಾನದಲ್ಲಿ ಪ್ಲಾಸ್ಟಿಕ್ ವಿಲೇವಾರಿ ಘಟಕ, ಶೌಚಗೃಹ ನಿರ್ವಹಣೆ ಮುಂತಾದ ಕಾರ್ಯಗಳನ್ನು ಮಾಡಬೇಕಿದೆ. ಮಾರ್ಗಸೂಚಿ ಬದಲಿಸುವುದು ಕೇಂದ್ರ ಸರ್ಕಾರದ ಮಟ್ಟದಲ್ಲಿ ಆಗಬೇಕಿದೆ. ಈ ಕುರಿತು ಸರ್ಕಾರದ ಅಧೀನ ಕಾರ್ಯದರ್ಶಿಗಳ ಜತೆ ಮಾತನಾಡುತ್ತೇನೆ. ಮಾರ್ಗಸೂಚಿ ಅನ್ವಯ ಇದ್ದರೆ ಕೆಲವು ಕ್ರಿಯಾ ಯೋಜನೆಗಳನ್ನು ಜು. 31ರೊಳಗೆ ಬದಲಿಸಿಕೊಡುತ್ತೇನೆ. | ಎಂ. ರೋಶನ್ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ