ಕಾರವಾರ: ಜಿಲ್ಲೆಯಲ್ಲಿ ಕರೊನಾ ಪರೀಕ್ಷೆಯನ್ನು ದ್ವಿಗುಣಗೊಳಿಸಲು ನಿರ್ಧರಿಸಲಾಗಿದ್ದು, ಇನ್ನು 15 ದಿನದಲ್ಲಿ ಕ್ರಿಮ್ಸ್ ಪ್ರಯೋಗಾಲಯದಲ್ಲಿ ಹೊಸ ಆರ್ಟಿಪಿಸಿಆರ್ ಯಂತ್ರ ಅಳವಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಹೊಸ ಯಂತ್ರದಿಂದ ಪ್ರತಿ ದಿನ 1 ಸಾವಿರ ಪರೀಕ್ಷೆಗಳನ್ನು ಮಾಡಬಹುದಾಗಿದೆ. ಅಲ್ಲದೆ, ಪ್ರತಿ ದಿನ 1 ಸಾವಿರ ರ್ಯಾಪಿಡ್ ಆಂಟಿಜನ್ ಪರೀಕ್ಷೆ ನಡೆಸಲು ಸರ್ಕಾರ ಕಿಟ್ ಒದಗಿಸಿದೆ. ಒಟ್ಟಾರೆ, ದಿನಕ್ಕೆ 2 ಸಾವಿರ ಪರೀಕ್ಷೆ ಮಾಡಲು ಉದ್ದೇಶಿಸಲಾಗಿದೆ. ಇದರಿಂದ ಸೋಂಕಿತರನ್ನು ಬಹು ಬೇಗನೆ ಪತ್ತೆ ಹಚ್ಚಿ ರೋಗದ ಹರಡುವಿಕೆ ತಡೆಯಬಹುದಾಗಿದೆ ಎಂದಿದ್ದಾರೆ.
ಜಿಲ್ಲೆಯಲ್ಲಿ ಪತ್ತೆಯಾಗಿರುವ ಶೇ. 75 ಸೋಂಕಿತರು ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಈಗ ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳಲು 24 ದಿನಗಳು ಬೇಕಾಗಿದ್ದು, ಒಳ್ಳೆಯ ಬೆಳವಣಿಗೆ. ಮರಣ ಪ್ರಮಾಣ ಶೇ. 1ಕ್ಕಿಂತ ಕಡಿಮೆ ಇದೆ. 6579 ಜನರು ಸಕ್ರಿಯ ಕ್ವಾರೆಂಟೈನ್ನಲ್ಲಿದ್ದು ಪಾಸಿಟಿವ್ ಪ್ರಮಾಣ ಶೇ. 6ಕ್ಕಿಂತ ಕಡಿಮೆ ಇದೆ. ಪ್ರತಿಯೊಬ್ಬ ಸೋಂಕಿತರಿಗೂ 10 ಜನ ಪ್ರಾಥಮಿಕ ಹಾಗೂ ದ್ವಿತೀಯ ಸಂರ್ಪತರನ್ನು ಪರೀಕ್ಷಿಸುತ್ತಿದ್ದು, ಪ್ರತಿ ದಿನ 1600 ಜನರ ಗಂಟಲ ದ್ರವ ಪರೀಕ್ಷೆ ಮಾಡಲಾಗುತ್ತಿದೆ. ಶೇಕಡ 91ರಷ್ಟು ಸೋಂಕಿತರಿಗೆ ರೋಗ ಲಕ್ಷಣ ಕಾಣುತ್ತಿಲ್ಲ. ಶೇ. 9ರಷ್ಟು ಸೋಂಕಿತರಲ್ಲಿ ಕೆಲವು ಲಕ್ಷಣಗಳು ಕಂಡು ಬರುತ್ತಿವೆ. ಸಕ್ರಿಯ ಸೋಂಕಿತರು 903 ಜನರಿದ್ದಾರೆ. ಇದುವರೆಗಿನ ಒಟ್ಟಾರೆ ಸೋಂಕಿತರಲ್ಲಿ , 102 ಜನ 5 ವರ್ಷಕ್ಕಿಂತ ಕೆಳಗಿನವರು. 146 ಜನ 6ರಿಂದ 10 ವರ್ಷದವರು. 425 ಜನ 11ರಿಂದ 20 ವರ್ಷದವರು, 858ಜನ 21ರಿಂದ 30 ವರ್ಷದವರು, 676 ಜನ 31 ರಿಂದ 40 ವರ್ಷದವರು, 579 ಜನ 41ರಿಂದ 50 ವರ್ಷದವರು, 417 ಜನ 51ರಿಂದ 60 ವರ್ಷದವರು ಮತ್ತು 358 ಜನ 60 ವರ್ಷಕ್ಕಿಂತ ಮೇಲ್ಪಟ್ಟ ಸೋಂಕಿತರು ಕಂಡು ಬಂದಿದ್ದಾರೆ. ರೋಗ ಲಕ್ಷಣ ರಹಿತ ಸೋಂಕಿತರಲ್ಲಿ ಪಾಸಿಟಿವಿಟಿ ರೇಟ್ ಶೇ. 7ರಷ್ಟು ಇದ್ದು ರೋಗ ಲಕ್ಷಣ ಇರುವ ಸೋಂಕಿತರಲ್ಲಿ ಪಾಸಿಟಿವಿಟಿ ರೇಟ್ ಶೇ. 16ರಷ್ಟಿದೆ. ಒಂದು ಮಿಲಿಯನ್ ಜನರಲ್ಲಿ 9291 ಜನರನ್ನು ಪರೀಕ್ಷೆಗೆ ಒಳಪಡಿಸುತ್ತಿದ್ದು ಈವರೆಗೂ 50 ಸಾವಿರಕ್ಕಿಂತಲೂ ಹೆಚ್ಚು ಪರೀಕ್ಷೆಗಳನ್ನು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದ್ದಾರೆ.
ಕರೊನಾ ನಿಯಂತ್ರಣಕ್ಕೆ ಜಿಲ್ಲಾಡಳಿತ ಬದ್ಧವಾಗಿದ್ದು, ಎಲ್ಲ ಕ್ರಮ ವಹಿಸಿದೆ. ಪ್ರತಿಯೊಬ್ಬರೂ ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಬೇಕು. ಸೂಚನೆಗಳನ್ನು ಪಾಲಿಸಬೇಕು. ಸಾಂಕ್ರಾಮಿಕ ರೋಗ ಪೀಡಿತರಿಗೆ ಉತ್ತಮ ರೀತಿಯ ಚಿಕಿತ್ಸೆ ಒದಗಿಸಲು ಸರ್ಕಾರ ಬದ್ದವಾಗಿದೆ. ಈ ತಿಂಗಳ ಅಂತ್ಯದ ಒಳಗೆ ಪ್ರತಿ ತಾಲೂಕು ಆರೋಗ್ಯ ಕೇಂದ್ರಗಳಲ್ಲಿ 50 ಹಾಸಿಗೆಗಳಿಗೆ ಆಮ್ಲಜನಕ ಪೂರೈಕೆ ವ್ಯವಸ್ಥೆ ಕಲ್ಪಿಸಲಾಗುವುದು. ಈಗಾಗಲೇ ಕಾರವಾರ ವೈದ್ಯಕೀಯ ಕಾಲೇಜಿಗೆ 30 ವೆಂಟಿಲೇಟರ್, 10 ಹೈ ಫೋ› ನಸೆಲ್ ಕೆನಲ್ (ಎಚ್ಪಿಎನ್ಸಿ) ಒದಗಿಸಲಾಗಿದ್ದು, ಎಲ್ಲ ಆಧುನಿಕ ಔಷಧಗಳೊಂದಿಗೆ ಸೋಂಕಿತರಿಗೆ ಗುಣಮಟ್ಟದ ಚಿಕಿತ್ಸೆ ನೀಡಲು ಸಜ್ಜು ಮಾಡಲಾಗಿದೆ. | ಡಾ. ಹರೀಶ ಕುಮಾರ ಕೆ.ಜಿಲ್ಲಾಧಿಕಾರಿ
111 ಜನರಿಗೆ ಸೋಂಕು: ಜಿಲ್ಲೆಯಲ್ಲಿ ಭಾನುವಾರ 111 ಜನರಲ್ಲಿ ಕರೊನಾ ಸೋಂಕು ಖಚಿತವಾಗಿದೆ. 63 ಜನ ಗುಣ ಹೊಂದಿ ಬಿಡುಗಡೆಯಾಗಿದ್ದಾರೆ. ಮುಂಡಗೋಡಿನಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ. ಕಾರವಾರ, ಅಂಕೋಲಾದಲ್ಲಿ ತಲಾ 3, ಹೊನ್ನಾವರದಲ್ಲಿ 30, ಭಟ್ಕಳದಲ್ಲಿ 16, ಶಿರಸಿಯಲ್ಲಿ 2, ಸಿದ್ದಾಪುರದಲ್ಲಿ 25, ಮುಂಡಗೋಡಿನಲ್ಲಿ 11, ಹಳಿಯಾಳ ಮತ್ತು ದಾಂಡೇಲಿಯಲ್ಲಿ 18 ಜನರಿಗೆ ಕರೊನಾ ಖಚಿತವಾಗಿದೆ. ಕಾರವಾರದಲ್ಲಿ 9, ಹೊನ್ನಾವರದಲ್ಲಿ 4, ಮುಂಡಗೋಡಿನಲ್ಲಿ 30 ಹಳಿಯಾಳ ಮತ್ತು ದಾಂಡೇಲಿಯಲ್ಲಿ 18 ಜನ ಗುಣ ಹೊಂದಿ ಬಿಡುಗಡೆಯಾಗಿದ್ದಾರೆ.ಒಟ್ಟಾರೆ ಸೋಂಕಿತರ ಸಂಖ್ಯೆ 3948ಕ್ಕೆ ತಲುಪಿದ್ದು, 3040 ಜನ ಗುಣವಾಗಿದ್ದಾರೆ. 868 ಸಕ್ರಿಯ ಪ್ರಕರಣಗಳಿದ್ದು, ಮೃತರ ಸಂಖ್ಯೆ 40 ಕ್ಕೇರಿದೆ.