ಜಿಲ್ಲೆ

ಕ್ರಿಮಿನಲ್ ಮೊಕದ್ದಮೆಗೆ ಸೂಚನೆ

ರಾಣೆಬೆನ್ನೂರ: ನೆರೆ ಪರಿಹಾರ ನೀಡುವಲ್ಲಿ ಅವ್ಯವಹಾರ ನಡೆದಿರುವ ಹಿನ್ನೆಲೆಯಲ್ಲಿ ಅಪರ ಜಿಲ್ಲಾಧಿಕಾರಿ ಯೋಗೇಶ್ವರ ಎಸ್. ಗುರುವಾರ ನಗರದ ಮಿನಿ ವಿಧಾನಸೌಧದ ತಹಸೀಲ್ದಾರ್ ಕಚೇರಿಯಲ್ಲಿ ನೆರೆ ಸಂತ್ರಸ್ತರ ಹಾಗೂ ನೆರೆ ಪರಿಹಾರ ವಂಚಿತರಿಂದ ಅಹವಾಲು ಮತ್ತು ದೂರು ಸ್ವೀಕರಿಸಿದರು.

ಕ್ರಿಮಿನಲ್ ಮೊಕದ್ದಮೆ ಹೂಡಲು ಸೂಚನೆ: ನಗರದ ಇಸ್ಲಾಂಪುರ ಗಲ್ಲಿಯ ನಿವಾಸಿ ಹನುಮವ್ವ ಕೆಂಪಹನುಮಣ್ಣನವರ ಎಂಬ ಸಂತ್ರಸ್ತೆ ‘ನಮ್ಮ ಮನೆ ಸಂಪೂರ್ಣ ಬಿದ್ದಿದೆ. ಆಗ ಪಕ್ಕದ ಮನೆಯವರದ್ದು ಕೊಂಚ ಗೋಡೆ ಕುಸಿದು ಬಿದ್ದಿತ್ತು. ಅವರು ನಮ್ಮ ಮನೆ ಮುಂದೆ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ. ಅವರಿಗೆ ಈಗಾಗಲೇ ಪರಿಹಾರವೂ ಬಂದಿದೆ. ಆದರೆ, ನಿಜವಾದ ಮನೆ ಮಾಲೀಕರಾದ ನಾವು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದೇವೆ. ನಮಗೆ ನಯಾಪೈಸೆ ಪರಿಹಾರ ನೀಡಿಲ್ಲ’ ಎಂದು ಎಡಿಸಿ ಯೋಗೇಶ್ವರ ಅವರಿಗೆ ದೂರು ಸಲ್ಲಿಸಿದರು.

ಇದಕ್ಕೆ ಸ್ಪಂದಿಸಿದ ಎಡಿಸಿ, ಕೂಡಲೆ ಹನುಮವ್ವ ಅವರ ಬಿದ್ದ ಮನೆಗೆ ಭೇಟಿ ನೀಡಿ ಪರಿಶೀಲಿಸಬೇಕು. ಇವರ ಆರೋಪ ನಿಜವಾಗಿದ್ದರೆ, ಸಂಬಂಧಪಟ್ಟ ಅಧಿಕಾರಿ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದು ತಹಸೀಲ್ದಾರ್ ಬಸವನಗೌಡ ಕೋಟೂರು ಅವರಿಗೆ ಸೂಚಿಸಿದರು.

ಸಮೀಕ್ಷೆ ಮಾಡುವಲ್ಲಿ ಅನ್ಯಾಯ: ಎರೇಕುಪ್ಪಿ ಗ್ರಾಮದ ರೈತ ಮಂಜುನಾಥ, ‘ನಮ್ಮದು 4.5 ಎಕರೆ ಜಮೀನಿನಲ್ಲಿ ಬೆಳೆದ ಮೆಕ್ಕೆಜೋಳ ಸಂಪೂರ್ಣ ಹಾಳಾಗಿದೆ. ಪಕ್ಕದ ರೈತನದ್ದು 2 ಎಕರೆ ಹಾಳಾಗಿದೆ. ಆತನಿಗೆ 27 ಸಾವಿರ ರೂ. ಪರಿಹಾರ ಬಂದಿದೆ. ನನಗೆ 4.5 ಎಕರೆ ಸೇರಿ ಕೇವಲ 13 ಸಾವಿರ ರೂ. ಪರಿಹಾರ ಬಂದಿದೆ’ ಎಂದು ಅಳಲು ತೋಡಿಕೊಂಡರು.

ಈ ಕುರಿತು ಪರಿಶೀಲಿಸಿದಾಗ, ಮಂಜುನಾಥನಿಗೆ ಕೇವಲ 2 ಎಕರೆ ಬೆಳೆ ಹಾನಿಯ ಪರಿಹಾರ ನೀಡಲಾಗಿದೆ ಎಂಬುದು ತಿಳಿದು ಬಂದಿತು. ‘ಮಂಜುನಾಥನಿಗೆ 33 ಸಾವಿರ ರೂ. ಪರಿಹಾರ ಬರಬೇಕಿತ್ತು. ಆದ್ದರಿಂದ ಇವರ ಬೆಳೆ ಹಾನಿ ಸಮೀಕ್ಷೆ ಮಾಡಿದ ತಂಡಕ್ಕೆ ಶೋಕಾಸ್ ನೋಟಿಸ್ ಜಾರಿ ಮಾಡಿ, ವರದಿ ಕೊಡಲು ಹೇಳಿ ಎಂದು ತಹಸೀಲ್ದಾರ್​ಗೆ ಸೂಚಿಸಿದರು. ಮುಂದಿನ ವಾರ ಜಮೀನಿಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ ಎಂದು ರೈತನಿಗೆ ಎಡಿಸಿ ಭರವಸೆ ನೀಡಿದರು.

ಸರ್ವಂದ ಗ್ರಾಮದಲ್ಲಿ 18 ರೈತರು ಸೇರಿ ದೂರು ಸಲ್ಲಿಸಲು ಬಂದ 12ಕ್ಕೂ ಅಧಿಕ ರೈತರಿಗೆ ಪರಿಹಾರ ಅನುಮೋದನೆ ಆಗಿದ್ದರೂ ಹಣ ಖಾತೆಗೆ ಜಮಾ ಆಗಿರಲಿಲ್ಲ. ಈ ಕುರಿತು ಪರಿಶೀಲಿಸಿದಾಗ, ರೈತರ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ನಂಬರ್ ಲಿಂಕ್ ಇಲ್ಲದ ಕಾರಣ ಹಣ ಜಮಾ ಆಗಿಲ್ಲ ಎಂಬುದು ತಿಳಿದು ಬಂತು. ಕೂಡಲೆ ಎಲ್ಲರೂ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳುವಂತೆ ಎಡಿಸಿ ಸೂಚಿಸಿದರು.

ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ: ನೆರೆ ಪರಿಹಾರ ಅವ್ಯವಹಾರದ ಕುರಿತು ‘ವಿಜಯವಾಣಿ’ಯೊಂದಿಗೆ ಮಾತನಾಡಿದ ಎಡಿಸಿ ಯೋಗೇಶ್ವರ, ಸರ್ಕಾರ ನೆರೆ ಸಂತ್ರಸ್ತರಿಗೆ ಪರಿಹಾರ ನೀಡಲು ತಂತ್ರಾಂಶ ರೂಪಿಸಿತ್ತು. ಆದರೆ, ತಂತ್ರಾಂಶದ ಒಳಹೊರ ಗೊತ್ತಿರುವವರು ಅದನ್ನು ದುರ್ಬಳಕೆ ಮಾಡಿಕೊಂಡು ಅನರ್ಹ ಫಲಾನುಭವಿಗಳಿಗೆ ಹಣ ಜಮಾ ಆಗುವಂತೆ ಮಾಡಿದ್ದಾರೆ. ಶಿಗ್ಗಾಂವಿಯಲ್ಲಿ ಕಂಪ್ಯೂಟರ್ ಆಪರೇಟರ್​ನೊಬ್ಬ ಪೊಲೀಸನಿಗೆ ಅವನ ಹೆಂಡತಿ, ತಂಗಿ, ಅಕ್ಕ ಹೀಗೆ ಅವರ ಕುಟುಂಬಸ್ಥರಿಗೆ ಹಣ ಹೋಗುವಂತೆ ಮಾಡಿದ್ದಾನೆ. ಗ್ರಾಮಲೆಕ್ಕಿಗ ಕೂಡ ಅದನ್ನೇ ಮಾಡಿದ್ದಾನೆ. ರಾಜ್ಯದ ವಿವಿಧೆಡೆಯಿಂದ ಆಧಾರ್ ನಂಬರ್ ತೆಗೆದುಕೊಂಡು ಬಂದು ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ಈ ಕುರಿತು ಈಗಾಗಲೇ ಸಂಬಂಧಪಟ್ಟವರ ಮೇಲೆ ದೂರು ದಾಖಲಿಸಲಾಗಿದೆ. ದೂರು ಹಾಗೂ ಅಹವಾಲು ಸ್ವೀಕಾರ ಮುಗಿದ ಬಳಿಕ ನಾವೇ ಸ್ವತಃ ಸ್ಥಳ ಪರಿಶೀಲನೆ ಮಾಡುತ್ತೇವೆ. ಇದರಲ್ಲಿ ಯಾರೇ ತಪ್ಪಿತಸ್ಥರು ಸಿಕ್ಕರೂ ಅವರ ವಿರುದ್ಧ ಕಾನೂನು ಪ್ರಕಾರ ದೂರು ದಾಖಲಿಸುತ್ತೇವೆ. ಯಾರನ್ನೂ ಬಿಡುವುದಿಲ್ಲ ಎಂದರು.