ಧಾರವಾಡ: ಕ್ರಿಕೆಟ್ ಬೆಟ್ಟಿಂಗ್ನಲ್ಲಿ ತೊಡಗಿದ್ದ ಇಬ್ಬರನ್ನು ಉಪನಗರ ಠಾಣೆಯ ಪೊಲೀಸರು ನಗರದ ಸಪ್ತಾಪುರ ಬಡಾವಣೆಯಲ್ಲಿ ಶನಿವಾರ ಬಂಧಿಸಿದ್ದಾರೆ. ತಾಲೂಕಿನ ಸಲಕಿನಕೊಪ್ಪ ಗ್ರಾಮದ ಅವಿನಾಶ ಉರ್ಫ್ ಅವಿ ಚವ್ಹಾಣ ಮತ್ತು ಕೆಲಗೇರಿ ಆಂಜನೇಯ ನಗರದ ಮಂಜುನಾಥ ಬಸಪ್ಪ ವಾಲೀಕಾರ ಬಂಧಿತ ಆರೋಪಿಗಳು. ಬಂಧಿತರಿಂದ 7,60,100 ರೂ. ನಗದು ಮತ್ತು 3 ಮೊಬೈಲ್ಗಳನ್ನು ದಾಳಿ ವೇಳೆ ಪೊಲೀಸರು ಜಪ್ತಿ ಮಾಡಿದ್ದಾರೆ. ಆರೋಪಿಗಳು ಸಪ್ತಾಪುರ ಬಡಾವಣೆಯ ಸ್ಪಂದನಾ ಆಸ್ಪತ್ರೆಯ ಬಳಿ ರಸ್ತೆಬದಿಯಲ್ಲಿ ಶಾರ್ಜಾದಲ್ಲಿ ನಡೆಯುತ್ತಿದ್ದ ಐಪಿಎಲ್ ಕ್ರಿಕೆಟ್ ಪಂದ್ಯದ ಸಂದರ್ಭದಲ್ಲಿ ಬೆಟ್ಟಿಂಗ್ ನಡೆಸುತ್ತಿದ್ದರು.
ಎಸಿಪಿ ಜಿ. ಅನುಷಾ ಮಾರ್ಗದರ್ಶನದಲ್ಲಿ ಉಪನಗರ ಠಾಣೆಯ ಸಿಪಿಐ ಪ್ರಮೋದ ಯಲಿಗಾರ ನೇತೃತ್ವದಲ್ಲಿ ಪಿಎಸ್ಐ ಶ್ರೀಮಂತ ಹುಣಸಿಕಟ್ಟಿ, ಸಿಬ್ಬಂದಿ ಬಸವರಾಜ ಮಾಗುಂಡನವರ, ಕೆ.ಎಂ. ಡೊಕ್ಕನವರ, ಆರ್.ಎಚ್. ಬಡ್ನಿ, ಯು.ಡಿ. ಬಂಗಾರಿ, ಚೇತನ ಇಂಗಳಗಾವಿ ಮತ್ತು ಆನಂದ ಬಡಿಗೇರ ದಾಳಿಯಲ್ಲಿ ಪಾಲ್ಗೊಂಡಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.</