ಹುಬ್ಬಳ್ಳಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ 229ನೇ ಹುತಾತ್ಮ ದಿನಾಚರಣೆ ಹಾಗೂ ರಾಯಣ್ಣ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜ. 26ರಂದು ಸಂಜೆ 4ಕ್ಕೆ ನಗರದ ಕಿತ್ತೂರ ರಾಣಿ ಚನ್ನಮ್ಮ ವೃತ್ತದಲ್ಲಿ ಏರ್ಪಡಿಸಲಾಗಿದೆ ಎಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿಯ ಎಚ್.ಎಫ್. ಮುದಕಣ್ಣವರ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೈದ್ಯಕೀಯ ಕ್ಷೇತ್ರ, ಕಲಾವಿದರು ಹಾಗೂ ನಿರೂಪಕರು, ಪತ್ರಿಕಾರಂಗ, ಸಮಾಜ ಸೇವೆ, ಕನ್ನಡ ಚಳವಳಿ ಹಾಗೂ ಜಾಗೃತಿ, ಸಾರಿಗೆ, ನ್ಯಾಯಾಂಗ, ಪೊಲೀಸ್ ಇಲಾಖೆಯಲ್ಲಿ ಸಾಧನೆಗೈದವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.
ಮನಸೂರು ರೇವಣಸಿದ್ಧೇಶ್ವರ ಮಹಾಮಠದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಕಾರ್ಯಕ್ರಮ ಉದ್ಘಾಟಿಸುವರು. ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ, ಇತರರು ಅತಿಥಿಗಳಾಗಿ ಪಾಲ್ಗೊಳ್ಳುವರು.
ಶಿವಾನಂದ ಜೋಗಿನ ನೇತೃತ್ವ ವಹಿಸುವರು. ರಾಜಗುರು ಮೆಲೋಡಿಸ್ನ ಗುರು ಚಲವಾದಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಜೂ. ಅಂಬರೀಷ್ ಫಕೀರೇಶ ಪಾಲ್ಗೊಳ್ಳುವರು.
ಹಿತರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಶಿವಾನಂದ ಮುತ್ತಣ್ಣವರ, ಯಲ್ಲಪ್ಪ ಕುಂದಗೋಳ, ಗುರು ಚಲವಾದಿ, ಮಲ್ಲಿಕಾರ್ಜುನ ತಾಲೂರ ಸುದ್ದಿಗೋಷ್ಠಿಯಲ್ಲಿದ್ದರು.