ಜಿಲ್ಲೆ

ಕ್ರಮಕ್ಕೆ ಕಬ್ಬು ಬೆಳೆಗಾರರ ಆಗ್ರಹ

ಹಳಿಯಾಳ: ಸಕ್ಕರೆ ಕಾರ್ಖಾನೆಯವರು ಆರೋಗ್ಯ ಸುರಕ್ಷತೆ ಕಡೆಗಣಿಸಿ ಮಹಾರಾಷ್ಟ್ರದಿಂದ ಆಗಮಿಸುತ್ತಿರುವ ಲಗಾಣಿ ತಾಂಡಾಗಳನ್ನು ಕೋವಿಡ್ ಪರೀಕ್ಷೆಗೊಳಪಡಿಸದೇ ಗ್ರಾಮಾಂತರ ಭಾಗಗಳಿಗೆ ರವಾನಿಸುತ್ತಿದ್ದಾರೆ. ಹೀಗಾಗಿ ಹಳಿಯಾಳ ತಾಲೂಕು ಕೋವಿಡ್ ಹಾಟ್​ಸ್ಪಾಟ್ ಆಗುವ ಮುಂಚೆಯೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ತಾಲೂಕು ಕಬ್ಬು ಬೆಳೆಗಾರರ ಸಂಘವು ಜಿಲ್ಲಾಡಳಿತಕ್ಕೆ ಆಗ್ರಹಿಸಿದೆ.

ಸೋಮವಾರ ಸಂಜೆ ಮಿನಿವಿಧಾನಸೌಧಕ್ಕೆ ತೆರಳಿದ ಕಬ್ಬು ಬೆಳೆಗಾರರ ನಿಯೋಗವು ತಹಸೀಲ್ದಾರ್ ವಿದ್ಯಾಧರ ಗುಳಗುಳೆ ಅವರಿಗೆ ಮನವಿ ಸಲ್ಲಿಸಿತು. ಸರ್ಕಾರದ ಆದೇಶದಂತೆ ಕಾರ್ಖಾನೆಯವರು ಮತ್ತು ಕಬ್ಬು ಬೆಳೆಗಾರರು ಸಭೆ ನಡೆಸಿ ದರ ನಿಗದಿ ಹಾಗೂ ಬಾಕಿ ಪಾವತಿಯ ಕುರಿತು ರ್ಚಚಿಸಿ ಒಪ್ಪಂದ ಮಾಡಬೇಕು. ಆದರೆ ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯವರು ಸಭೆ ನಡೆಸದೇ ಸರ್ಕಾರದ ಆದೇಶ ಉಲ್ಲಂಘಿಸಿದ್ದಾರೆ. ರೈತರಿಗೆ ಸೂಕ್ತ ಮಾಹಿತಿ ನೀಡದೇ ಗ್ರಾಮಾಂತರ ಭಾಗಕ್ಕೆ ಕಟಾವು ತಾಂಡಾಗಳನ್ನು ಕಳುಹಿಸಿ ರೈತವರ್ಗದಲ್ಲಿ ಒಡಕು ಸೃಷ್ಟಿಸುತ್ತಿದ್ದು, ತಕ್ಷಣ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಕಾರ್ಖಾನೆ ಮತ್ತು ಕಬ್ಬು ಬೆಳೆಗಾರರ ನಡುವೆ ಉಂಟಾಗಲಿರುವ ಸಂಘರ್ಷಕ್ಕೆ ತಡೆಯೊಡ್ಡಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಕಡ್ಡಾಯ ಕೋವಿಡ್ ಪರೀಕ್ಷೆ: ಬಳಿಕ ತಹಸೀಲ್ದಾರರು ಕಬ್ಬು ಬೆಳೆಗಾರರೊಂದಿಗೆ ಸಭೆ ನಡೆಸಿದರು. ಮಹಾರಾಷ್ಟ್ರದಿಂದ ಹಳಿಯಾಳ ತಾಲೂಕಿಗೆ ಆಗಮಿಸುತ್ತಿರುವ ಲಗಾಣಿ ತಾಂಡಾಗಳ ಬಗ್ಗೆ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಶಂಕರ ಕಾಜಗಾರ, ಅಶೋಕ ಮೇಟಿ, ಶಿವಪುತ್ರಪ್ಪ ನುಚ್ಚಂಬ್ಲಿ, ಗಿರೀಶ ಠೊಸುರ, ಸುರೇಶ ಶಿವಣ್ಣನವರ ಇತರರು ಆತಂಕ ವ್ಯಕ್ತಪಡಿಸಿದರು. ಲಗಾಣಿ ತಾಂಡಾದವರು ಪಟ್ಟಣದಲ್ಲಿ, ಗ್ರಾಮಾಂತರ ಭಾಗದಲ್ಲಿ ಬೇಕಾಬಿಟ್ಟಿ ತಿರುಗಾಡುತ್ತಿದ್ದಾರೆ. ಯಾರೂ ಮಾಸ್ಕ್ ಧರಿಸುತ್ತಿಲ್ಲ ಎಂದು ದೂರಿದರು.

ಪ್ರತಿಕ್ರಿಯಿಸಿದ ತಹಸೀಲ್ದಾರ್, ಹಳಿಯಾಳಕ್ಕೆ ಆಗಮಿಸುವ ಎಲ್ಲ ಲಗಾಣಿ ತಾಂಡಾಗಳ ಕೋವಿಡ್ ಪರೀಕ್ಷೆಯನ್ನು ಮಾಡಿಸಲಾಗುವುದು. ಈ ಕುರಿತು ತಾಲೂಕು ಆರೋಗ್ಯ ಇಲಾಖೆ ಹಾಗೂ ಕಾರ್ಖಾನೆಯ ಅಧಿಕಾರಿಗಳೊಂದಿಗೆ ಮಾತನಾಡಿರುವುದಾಗಿ ತಿಳಿಸಿದರು. ಸಂಜು ಉಪ್ಪಿನ, ಮಂಜುನಾಥ ಬೆಡದೊಳಕರ, ಅನ್ವರ ಪುಂಗಿ, ಯಲ್ಲಾರಿ ಬೊಬಾಟಿ ಇದ್ದರು.