ಜಿಲ್ಲೆ

ಕ್ಯಾನ್ಸರ್‌ಗೆ ಹೆದರುವ ಅಗತ್ಯವಿಲ್ಲ:  ಫಾ.ಆಲ್ಫ್ರೆಡ್ ಮೆಂಡೊನ್ಸರ್

ಮೈಸೂರು: ಕ್ಯಾನ್ಸರ್ ರೋಗಕ್ಕೆ ಭಯ ಪಡುವ ಅಗತ್ಯವಿಲ್ಲ. ಆತ್ಮವಿಶ್ವಾಸದಿಂದ ಸವಾಲೆಸೆಯುವ ರೀತಿ ಬದುಕಬೇಕಾಗಿದೆ ಎಂದು ಮೈಸೂರು ಧರ್ಮಕ್ಷೇತ್ರದ ಗುರು ಫಾ.ಆಲ್ಫ್ರೆಡ್ ಮೆಂಡೊನ್ಸರ್ ಹೇಳಿದರು.

ಕ್ಯಾನ್ಸರ್ ದಿನದ ಅಂಗವಾಗಿ ಒಡಿಪಿ ಸಂಸ್ಥೆಯಲ್ಲಿ ಮಂಗಳವಾರ ಆಯೋಜಿಸಿದ್ದ ಕ್ಯಾನ್ಸರ್ ರೋಗಿಗಳಿಗೆ ಸಹಾಯ ಹಸ್ತ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕ್ಯಾನ್ಸರ್‌ಗೆ ತುತ್ತಾಗಿರುವವರು ಎದೆಗುಂದದೆ ಧೈರ್ಯದಿಂದ ಎದುರಿಸಬೇಕು. ವೈದ್ಯರು ಸೂಚಿಸುವ ಆಹಾರ ಕ್ರಮವನ್ನು ಅನುಸರಿಸಬೇಕು ಎಂದರು.

ಒಡಿಪಿ ಸಂಸ್ಥೆಯು ರೋಗದಿಂದ ಬಳಲುತ್ತಿರುವವರನ್ನು ಗುರುತಿಸಿ ಧನ ಸಹಾಯ ನೀಡುತ್ತಿರುವುದು ಬಹಳ ಶ್ಲಾಘನೀಯ ಎಂದರು.

ಫಾ.ಎಡ್ವರ್ಡ್ ಸಲ್ಡಾನ್ ಮಾತನಾಡಿ, ಅಸಹಜ ಆಸೆ ಉಳ್ಳವರು ಅಸಹಜ ಆಹಾರ ಪದಾರ್ಥಗಳನ್ನು ಸೃಷ್ಟಿ ಮಾಡಿ ಮಾರಾಟ ಮಾಡುತ್ತಿದ್ದು, ಅದನ್ನು ಸೇವಿಸುತ್ತಿರುವುದರಿಂದ ಕ್ಯಾನ್ಸರ್ ರೋಗ ಬರಲು ಕಾರಣವಾಗಿದೆ ಎಂದು ತಿಳಿಸಿದರು.

ಕ್ಯಾನ್ಸರ್ ರೋಗಿಗಳ ಕಾಳಜಿ ಆರೈಕೆ, ಮುನ್ನೆಚ್ಚರಿಕೆ ಕ್ರಮ ಕುರಿತು ಮಾತನಾಡಿದ ನಾರಾಯಣ ಹೆಲ್ತ್ ಆಸ್ಪತ್ರೆಯ ಸರ್ಜಿಕಲ್ ಅಂಕೋಲಜಿ ವಿಭಾಗದ ವೈದ್ಯ ಡಾ.ನಿಶ್ಚಲ್ ರಾಜ್, ಈ ರೋಗ ತಡೆಗಟ್ಟಲು ಪ್ರತಿಯೊಬ್ಬರು ತಮ್ಮ ಜೀವನ ಶೈಲಿ ಬದಲಾಯಿಸಿಕೊಳ್ಳಬೇಕು ಎಂದರು.

ವಿವಿಧ ರೀತಿಯ ಕ್ಯಾನ್ಸರ್‌ನಿಂದ ಬಳಲುತ್ತಿರುವ ಸುಮಾರು 81 ರೋಗಿಗಳಿಗೆ ಚೆಕ್ ಮೂಲಕ ಸಹಾಯ ಹಸ್ತವನ್ನು ನೀಡಲಾಯಿತು. ಒಡಿಪಿ ಸಂಸ್ಥೆಯ ನಿರ್ದೇಶಕ ಫಾ.ಅಲೆಕ್ಸ್ ಪ್ರಶಾಂತ್ ಸಿಕ್ವೇರಾ, ಮೈಸೂರು ಧರ್ಮಪ್ರಾಂತ್ಯದ ಎಜುಕೇಷನಲ್ ಸೊಸೈಟಿಯ ಖಜಾಂಚಿ ಫಾ.ನವೀನ್ ಕುಮಾರ್ ಪಾಲ್ಗೊಂಡಿದ್ದರು.