ಜಿಲ್ಲೆ

<strong>ಕ್ಯಾನ್ಸರ್ ರೋಗ ಪತ್ತೆಗೆ ಡಿಜಿಟಲ್ ಪಿಇಟಿ ಸಹಾಯಕ</strong>

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ನಗರದ ಗೋಕುಲ ರಸ್ತೆಯ ನಿರಾಮಯ ಮೆಡಿಕಲ್ ಸೆಂಟರ್​ನಲ್ಲಿ ಉತ್ತರ ಕರ್ನಾಟಕದ ಮೊದಲ ಡಿಜಿಟಲ್ ಪಿಇಟಿ (ಪಾಸಿಟ್ರಾನ್ ಎಮಿಷನ್ ಟೊಮೊಗ್ರಾಫಿ)-ಸಿಟಿ ಸ್ಕೃಾನಿಂಗ್ ಯಂತ್ರವನ್ನು ಭಾನುವಾರ ಲೋಕಾರ್ಪಣೆ ಮಾಡಲಾಯಿತು.

ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಆನಂದ ಸಂಕೇಶ್ವರ ಅವರು ಉದ್ಘಾಟಿಸಿ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ವೈದ್ಯಕೀಯ ಸಿಬ್ಬಂದಿಯ ಪಾತ್ರ ಅಮೋಘವಾಗಿತ್ತು. ದಿನದ 24 ಗಂಟೆಯೂ ಕಾರ್ಯನಿರತರಾಗಿದ್ದರು. ಡಾ. ಬಿ.ಆರ್. ಪಾಟೀಲ ಅವರು ಇಂದಿಗೂ ಬಹಳಷ್ಟು ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದಾರೆ ಎಂದರು.

ಉತ್ತರ ಕರ್ನಾಟಕದಲ್ಲಿಯೇ ಪ್ರಥಮ ಬಾರಿಗೆ ಈ ಯಂತ್ರವನ್ನು ಹುಬ್ಬಳ್ಳಿಯಲ್ಲಿ ಅಳವಡಿಸಲಾಗಿದೆ. ಬದಲಾದ ಜೀವನಶೈಲಿಯಿಂದ ಅನೇಕರು ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಿದ್ದಾರೆ. ಕ್ಯಾನ್ಸರ್ ರೋಗ ಪತ್ತೆ ಹಚ್ಚಲು ಈ ಯಂತ್ರ ಬಹಳ ಉಪಯುಕ್ತವಾಗಿದೆ. 3 ಮತ್ತು 4ನೇ ಹಂತದಲ್ಲಿರುವ ಕ್ಯಾನ್ಸರ್ ರೋಗವನ್ನು ನಿಖರವಾಗಿ ಪತ್ತೆ ಹಚ್ಚುತ್ತದೆ ಎಂದರು.

ಎಸ್​ಡಿಎಂ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ನಿರಂಜನಕುಮಾರ ಮಾತನಾಡಿ, ತಾಂತ್ರಿಕವಾಗಿ ನಮ್ಮ ದೇಶ ಅಭಿವೃದ್ಧಿ ಹೊಂದುತ್ತಿದೆ. ಇದರಲ್ಲಿ ಪಿಇಟಿ ಕೂಡ ಒಂದು. ಇದರಿಂದ ಕ್ಯಾನ್ಸರ್ ರೋಗವನ್ನು ಬಹುಬೇಗ ಪತ್ತೆ ಹಚ್ಚಿ, ಶೀಘ್ರವೇ ಚಿಕಿತ್ಸೆ ನೀಡಲು ಅನುಕೂಲವಾಗುತ್ತದೆ ಎಂದರು.

ಕಿಮ್್ಸ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ಕೆಎಲ್​ಇ ಜೆಜಿಎಂಎಂ ವೈದ್ಯಕೀಯ ಕಾಲೇಜ್ ಪ್ರಾಚಾರ್ಯ ಡಾ. ಎಂ.ಜಿ. ಹಿರೇಮಠ, ಹಿರಿಯ ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ ಮಾತನಾಡಿದರು.

ನ್ಯೂಮೋಡ್ ಪ್ರೖೆವೇಟ್ ಲಿಮಿಟೆಡ್ ಅಧ್ಯಕ್ಷ ಡಾ. ಬಿ.ಆರ್. ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಇಂಥ ಯಂತ್ರವನ್ನು ಪ್ರಥಮವಾಗಿ ನಾವು ಅಳವಡಿಸಿದ್ದೇವೆ. ಇದರ ಉಪಯೋಗವನ್ನು ಅಗತ್ಯವಿರುವವರು ಪಡೆಯಬೇಕು ಎಂದು ವಿನಂತಿಸಿದರು. ಸಂಸ್ಥೆಯ ನಿರ್ದೇಶಕ ಡಾ. ಕಿರಣ ಕಟ್ಟಿಮನಿ, ಇತರರಿದ್ದರು.

ಸುಧಾರಿತ, ಸುರಕ್ಷಿತ ಸ್ಕೃಾನಿಂಗ್ ಯಂತ್ರ

ಅತ್ಯಂತ ಸುಧಾರಿತ ಹಾಗೂ ಸುರಕ್ಷಿತ ಸ್ಕೃಾನಿಂಗ್ ಯಂತ್ರ ಇದಾಗಿದೆ. ಇದರಲ್ಲಿ ವಿಕಿರಣದ ಪರಿಣಾಮವು ಶೇ. 50ರಿಂದ 70ರಷ್ಟು ಕಡಿಮೆ ಇರುತ್ತದೆ. ಕೇವಲ 7 ನಿಮಿಷಗಳಲ್ಲಿ ಸಂಪೂರ್ಣ ದೇಹದ ಸ್ಕೃಾನಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತದೆ. ರೋಗ ನಿರ್ಣಯಕ್ಕೆ ಪೂರಕವಾಗಿ ಉತ್ತಮ ಚಿತ್ರ ಸ್ಪಷ್ಟತೆ (ಇಮೇಜಿಂಗ್) ಒದಗಿಸುತ್ತದೆ. ಕ್ಯಾನ್ಸರ್ ಹಂತವನ್ನು ತಿಳಿಯುವುದರ ಜತೆಗೆ ಕ್ಯಾನ್ಸರ್ ಚಿಕಿತ್ಸೆಯು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ತಿಳಿಸುತ್ತದೆ.

| ಡಾ. ರಶ್ಮಿ ಅಂಗಡಿ, ಎಂಡಿ, ನ್ಯೂಮೋಡ್ ಪ್ರೖೆವೇಟ್ ಲಿಮಿಟೆಡ್

ಗುಣಮಟ್ಟದ ಚಿಕಿತ್ಸೆಗೆ ಅನುಕೂಲ

ಹುಬ್ಬಳ್ಳಿಯಲ್ಲಿ ಡಾ. ಬಿ.ಆರ್. ಪಾಟೀಲ ಅವರಂಥ ತಜ್ಞ ವೈದ್ಯರು ಇದ್ದಾರೆ. ಅತ್ಯಾಧುನಿಕ ವೈದ್ಯಕೀಯ ಯಂತ್ರೋಪಕರಣಗಳು ಬಂದಿವೆ. ರೋಗಿಗಳು ಬೇರೆ ರಾಜ್ಯಗಳಿಗೆ ಹೋಗುವುದು ತಪ್ಪುತ್ತಿದೆ. ಡಿಜಿಟಲ್ ಪಿಇಟಿ ಯಂತ್ರವನ್ನು ಹುಬ್ಬಳ್ಳಿಯಲ್ಲಿ ಅಳವಡಿಸಿರುವುದರಿಂದ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಕೊಡಲು ಬಹಳಷ್ಟು ಅನುಕೂಲವಾಗುತ್ತದೆ.

| ಡಾ. ವಿಜಯ ಸಂಕೇಶ್ವರ, ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್

ಹುಬ್ಬಳ್ಳಿ ಮೆಡಿಕಲ್ ಹಬ್

ಉತ್ತರ ಕರ್ನಾಟಕದ ಜನರಿಗೆ ಬಹಳಷ್ಟು ಉಪಯೋಗವಾಗುವ ಡಿಜಿಟಲ್ ಪಿಇಟಿ ಯಂತ್ರ ಅಳವಡಿಸಿರುವುದು ಸಂತೋಷದ ವಿಷಯ. ಹುಬ್ಬಳ್ಳಿಯು ಮೆಡಿಕಲ್ ಹಬ್ ಆಗಿ ಬೆಳೆಯುತ್ತಿದೆ. ಹಾಗಾಗಿ ಜನರು ಬೇರೆ ರಾಜ್ಯ, ಜಿಲ್ಲೆಗಳಿಗೆ ಹೋಗುವುದು ತಪ್ಪಲಿದೆ.

| ಪ್ರಲ್ಹಾದ ಜೋಶಿ, ಕೇಂದ್ರ ಸಚಿವ