ಜಿಲ್ಲೆ

ಕ್ಯಾನ್ಸರ್ ಬಗ್ಗೆ ನಿರ್ಲಕ್ಷ್ಯ ಸಲ್ಲದು

ಬಾಗಲಕೋಟೆ: ಮನುಷ್ಯನಿಗೆ ಶತ್ರುವಿನ ರೀತಿ ಕಾಡುವ ಕ್ಯಾನ್ಸರ್ ರೋಗದ ಬಗ್ಗೆ ಜನರಲ್ಲಿ ನಿರ್ಲಕ್ಷ್ಯ ಸಲ್ಲದು, ಜಾಗೃತಿಗೊಂಡು ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಮಲೇರಿಯಾ ನಿಯಂತ್ರಣಾಽಕಾರಿ ಡಾ.ಕುಸುಮಾ ಮಾಗಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಎನ್‌ಸಿಡಿ, ಸಮೀಕ್ಷಣಾ ಘಟಕ, ತಾಲೂಕು ಆರೋಗ್ಯಾಽಕಾರಿಗಳ ಕಚೇರಿ, ಬಿವಿವಿ ಹಾನಗಲ್ ಕುಮಾರೇಶ್ವರ ಔಷಧ ವಿಜ್ಞಾನ ಮಹಾವಿದ್ಯಾಲಯದ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಕ್ಯಾನ್ಸರ್ ದಿನಾಚರಣೆಯ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರೋಗದ ಕುರಿತು ಸರಿಯಾಗಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಫೆ.೪ ರಂದು ವಿಶ್ವ ಕ್ಯಾನ್ಸರ್ ದಿನವನ್ನಾಗಿ ಆಚರಿಸಲಾಗುತ್ತದೆ. ಜೊತೆಗೆ ಸರ್ಕಾರ ಮತ್ತು ಇತರೆ ಸಂಘ ಸಂಸ್ಥೆಗಳು ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕ್ಯಾನ್ಸರ್ ಬಗ್ಗೆ ಮುನ್ನೆಚ್ಚೆರಿಕೆ ನೀಡುವ ಕೆಲಸ ನಡೆದಿದೆ ಎಂದರು.

೨೦೨೫ರ ವಿಶ್ವ ಕ್ಯಾನ್ಸರ್ ದಿನದ ಘೋಷವಾಕ್ಯ 'ಯುನೈಟೆಡ್ ಬೈ ಯುನಿಕ್'. ವಿಶಿಷ್ಠತೆಯಿಂದ ಏಕತೆಯ ಮಹತ್ವವನ್ನು ತಿಳಿಸುವುದಾಗಿದೆ. ಈ ಕ್ಯಾನ್ಸರ್ ಅನ್ನು ಪರಿಣಾಮಕಾರಿಯಾಗಿ ಎದುರಿಸಲು ಆರಂಭಿಕ ಹಂತದಲ್ಲಿ ಪತ್ತೆಹಚ್ಚುವುದು ಮುಖ್ಯ. ಕ್ಯಾನ್ಸರ್‌ನಲ್ಲಿ ನೂರಕ್ಕಿಂತ ಹೆಚ್ಚು ವಿಧಗಳಿದ್ದು ಅವುಗಳಲ್ಲಿ ಚರ್ಮದ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್, ಪ್ರಾಸ್ಟೇಟ್ ಕ್ಯಾನ್ಸರ್, ಮೆಲನೋಮ, ಕೊಲೊರೆಕ್ಟಲ್ ಕ್ಯಾನ್ಸರ್, ಲಿಂಫೋಮ ಕ್ಯಾನ್ಸರ್, ಮೂತ್ರಪಿಂಡದ ಕ್ಯಾನ್ಸರ್ ಸಾಮಾನ್ಯವಾದವು ಎಂದು ವರದಿಗಳಿಂದ ತಿಳಿದು ಬಂದಿದೆ. ಆದರೆ ಭಾರತದಲ್ಲಿ ಬಾಯಿ, ಗರ್ಭಾಶಯ ಮತ್ತು ಸ್ತನ ಕ್ಯಾನ್ಸರ್ ಹೆಚ್ಚಾಗಿ ಕಂಡು ಬರುತ್ತೀವೆ ಎಂದು ತಿಳಿಸಿದರು.

ಕ್ಯಾನ್ಸರ್‌ಗೆ ಪ್ರಮುಖ ಕಾರಣಗಳಲ್ಲಿ ತಂಬಾಕು ಸೇವನೆಯೂ ಒಂದು. ತಂಬಾಕು ಸೇವನೆ ಬಿಟ್ಟು ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ಕಡಿಮೆ ಕೊಬ್ಬಿನ ಪ್ರೋಟೀನ್‌ಗಳು ಸಮೃದ್ಧವಾಗಿರುವ ಆಹಾರವನ್ನು ಸೇವಿಸುವತ್ತ ಗಮನಹರಿಸಬೇಕು. ಗರ್ಭಕಂಠ ಮತ್ತು ಇತರ ಕ್ಯಾನ್ಸರ್‌ಗಳ ಅಪಾಯ ಕಡಿಮೆ ಮಾಡುವ ಎಚ್‌ಪಿವಿ ಲಸಿಕೆ ಮತ್ತು ಯಕೃತ್ತಿನ ಕ್ಯಾನ್ಸರ್‌ನಿಂದ ರಕ್ಷಿಸುವ ಹೆಪಟೈಟಿಸ್ ಬಿ ಲಸಿಕೆಯಂತಹ ಕೆಲವು ಔಷಽಗಳು ಸಹಾಯ ಮಾಡುತ್ತವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹಾನಗಲ್ ಕುಮಾರೇಶ್ವರ ಔಷಧ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಶ್ರೀನಿವಾಸ್, ಎನ್‌ಸಿಡಿ ವಿಭಾಗದ ಜಿಲ್ಲಾ ಸಂಯೋಜಕ ಡಾ.ಅಂದಾನಗೌಡ ಪಾಟೀಲ, ಎನ್ಸಿಡಿ ಎಫ್ ಎಲ್ ಸಿ ಎಂ.ಬಿ.ಪಾಟೀಲ, ಹಿರಿಯ ಆರೋಗ್ಯ ನಿರೀಕ್ಷಣಾಽಕಾರಿ ಎಚ್.ಪಿ.ನಾಯ್ಕರ, ಜಿಲ್ಲಾ ತಂಬಾಕು ಸಲಹೆಗಾರರು ಶಶಿಕಾಂತ ಕುಮಟಳ್ಳಿ, ಜಿಲ್ಲಾ ಸಾಮಾಜಿಕ ಕಾರ್ಯಕರ್ತ ಶಿವಲಿಂಗ ಕರಗಣ್ಣಿ ಇದ್ದರು.