ಮಂಡ್ಯ ನಗರದಲ್ಲಿ ವಿಶ್ವ ಕ್ಯಾನ್ಸರ್ ಜಾಗೃತಿ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಜಾಥಾಗೆ ಜಿಲ್ಲಾ ಕಾರಾಗೃಹ ಅಧೀಕ್ಷಕ ಟಿ.ಕೆ.ಲೋಕೇಶ್ ಚಾಲನೆ ನೀಡಿದರು. ಡಾ.ಎಂ.ಡಿ.ಸಂಜಯ್, ಡಾ.ಕೆ.ಪಿ.ಅಶ್ವಥ್, ಡಾ.ಭವಾನಿ ಶಂಕರ್, ಡಾ.ಕೆ.ಆರ್.ಶಶಿಧರ್, ಡಾ.ಆಶಾಲತಾ, ಡಾ.ಅನಿಲ್ಕುಮಾರ್, ಡಾ.ವೇಣುಗೋಪಾಲ್, ಡಾ.ಜವರೇಗೌಡ, ಶಿವಾನಂದ ಇತರರಿದ್ದರು. 
ಜಿಲ್ಲೆ

ಕ್ಯಾನ್ಸರ್ ಗುಣಪಡಿಸಬಹುದಾದ ಕಾಯಿಲೆ

ಮಂಡ್ಯ: ಕ್ಯಾನ್ಸರ್ ಬಗ್ಗೆ ನಿರ್ಲಕ್ಷೃ ಮಾಡುವುದು ಬೇಡ. ಪ್ರಾಥಮಿಕ ಹಂತದಲ್ಲಿ ಗುರುತಿಸಿದರೆ ಕಾಯಿಲೆಯನ್ನು ಗುಣಪಡಿಸಬಹುದು ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಂ.ಡಿ.ಸಂಜಯ್ ಹೇಳಿದರು.
ನಗರದ ಡಿಎಚ್‌ಒ ಕಚೇರಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿ, ಜಿಲ್ಲಾ ಅಸಾಂಕ್ರಾಮಿಕ ರೋಗಗಳ ಘಟಕ(ಎನ್‌ಸಿಡಿ)ದ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಕ್ಯಾನ್ಸರ್ ಜಾಗೃತಿ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಿರ್ಲಕ್ಷೃ ಮಾಡದೆ ಕ್ಯಾನ್ಸರ್ ಲಕ್ಷಣ ಕಂಡುಬಂದಲ್ಲಿ ವೈದ್ಯರನ್ನು ಸಂಪರ್ಕಿಸಬೇಕು. ಅಂತೆಯೇ ಕಾಯಿಲೆ ಬಗ್ಗೆ ಆರೋಗ್ಯ ಇಲಾಖೆ ಸಿಬ್ಬಂದಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ಸಲಹೆ ನೀಡಿದರು.

ಕ್ಯಾನ್ಸರ್ ಕಾಯಿಲೆಗೆ ಪ್ರಥಮ ಹಂತದಲ್ಲಿಯೇ ಚಿಕಿತ್ಸೆ ತೆಗೆದುಕೊಂಡರೆ ಅದು ಮಾರಣಾಂತಿಕ ಆಗುವುದಿಲ್ಲ. ಭಾರತದಲ್ಲಿ ಕ್ಯಾನ್ಸರ್ ಕಾಯಿಲೆಯಿಂದ ಅತಿ ಹೆಚ್ಚು ಜನರು ಮೃತಪಡುತ್ತಿದ್ದಾರೆ. ದೇಶದ ಅತಿ ಹೆಚ್ಚು ಕ್ಯಾನ್ಸರ್ ರೋಗಿ ಹೊಂದಿರುವ ರಾಜ್ಯ ಕೇರಳವಾಗಿದ್ದು, ಕರ್ನಾಟಕ 6ನೇ ಸ್ಥಾನದಲ್ಲಿದೆ. ಕ್ಯಾನ್ಸರ್ ರೋಗ ಬರುವುದಕ್ಕೆ ಮುಖ್ಯ ಕಾರಣ ತಂಬಾಕು ಸೇವನೆ. ಆದ್ದರಿಂದ ತಂಬಾಕು ಸೇವನೆಯಿಂದ ದೂರವಿದ್ದು, ಜಿಲ್ಲೆಯನ್ನು ತಂಬಾಕು ಮುಕ್ತಗೊಳಿಸೋಣ. ಈ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಿ ಎಂದು ಮನವಿ ಮಾಡಿದರು. ಜಿಲ್ಲಾ ಕಾರಾಗೃಹ ಅಧೀಕ್ಷಕ ಟಿ.ಕೆ.ಲೋಕೇಶ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ನಾಗರಾಜು, ತಾಲೂಕು ಆರೋಗ್ಯಾಧಿಕಾರಿ ಡಾ.ಜವರೇಗೌಡ ಇತರರಿದ್ದರು.

ನಗರದಲ್ಲಿ ಜಾಗೃತಿ ಜಾಥಾ: ನಗರದ ಜಯಚಾಮರಾಜೇಂದ್ರ ಒಡೆಯರ್ ವೃತದಿಂದ ಹೊರಟ ಜಾಥಾ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗಿ ಡಿಎಚ್‌ಒ ಕಚೇರಿಯಲ್ಲಿ ಮುಕ್ತಾಯವಾಯಿತು.