ಜಿಲ್ಲೆ

ಕ್ಯಾತಿನಕೊಪ್ಪದಲ್ಲಿ ಅರಣ್ಯ ಇಲಾಖೆ ಬೋನಿಗೆ ಬಿದ್ದ ಹೆಣ್ಣು ಚಿರತೆ

ಹೊಳೆಹೊನ್ನೂರು: ಸಮೀಪದ ಕ್ಯಾತಿನಕೊಪ್ಪದಲ್ಲಿ ಭಾನುವಾರ ತಡರಾತ್ರಿ ಹೆಣ್ಣು ಚಿರತೆಯೊಂದು ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದೆ.

ಹೊಳಲೂರು ಸಮೀಪದ ಕ್ಯಾತಿನಕೊಪ್ಪ, ಆಲದಹಳ್ಳಿ, ಸುತ್ತಕೋಟೆ, ಸೋಮಿನಕೊಪ್ಪ ಭಾಗದ ಕೆಲ ಹಳ್ಳಿಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿತ್ತು. ಅರಣ್ಯ ಇಲಾಖೆ ಕ್ಯಾತಿನಕೊಪ್ಪದ ಸೋಮಿನಕೊಪ್ಪ ರಸ್ತೆಯಲ್ಲಿ ಮಂಜುನಾಥ ಎಂಬುವರ ಮನೆ ಬಳಿ ಬೋನು ಇಟ್ಟಿದ್ದು ನಾಯಿಯೊಂದನ್ನು ಕಟ್ಟಲಾಗಿತ್ತು. ಇದಕ್ಕೆ ಚಿರತೆ ಬೋನಿಗೆ ಬಿದ್ದಿದೆ. ಬೋನಿಗೆ ಬಿದ್ದ ಹೆಣ್ಣು ಚಿರತೆ ಅಂದಾಜು ಎರಡು ವರ್ಷ ಪ್ರಾಯದು ಎಂದು ಅಂದಾಜಿಸಲಾಗಿದೆ. ಕಳೆದ ಬಾರಿ ಇದೇ ಸ್ಥಳದಲ್ಲಿ ದೊಡ್ಡ ಗಾತ್ರದ ಗಂಡು ಚಿರತೆಯೊಂದು ಬೋನಿಗೆ ಬಿದ್ದಿತ್ತು. ಎರಡು ವರ್ಷಗಳ ಅಂತರದಲ್ಲಿ ಕ್ಯಾತಿನಕೊಪ್ಪದಲ್ಲಿ 2 ಮತ್ತು ಆಲದಹಳ್ಳಿಯಲ್ಲಿ 2 ಚಿರತೆ ಸೇರಿ 4 ಚಿರತೆಗಳು ಸೆರೆಯಾಗಿವೆ.

ಖುಷ್ಕಿ ಜಮೀನುಗಳಲ್ಲಿ ಬೆಳೆದಿರುವ ಮುಸುಕಿನ ಜೋಳದ ಬೆಳೆ ಕಟಾವಿಗೆ ಬಂದಿದೆ. ಅಡಕೆ ತೋಟಗಳಲ್ಲಿ ಎಲ್ಲಿ ನೋಡಿದರು ಚಿರತೆಗಳ ಹೆಜ್ಜೆ ಗುರುತುಗಳು ಕಾಣುತ್ತಿವೆ. ಅಡಕೆ ಕೊಯ್ಲಿಗೆ ಹೋಗಲು ರೈತರು ಹಿಂದೇಟು ಹಾಕುತ್ತಿದ್ದಾರೆ. ಗ್ರಾಮಸ್ಥರು ಜಮೀನುಗಳಿಗೆ ಹೋಗಲು ಭಯಪಡುತ್ತಿದ್ದಾರೆ. ಹಗಲು ವೇಳೆಯಲ್ಲೇ ಈ ಭಾಗದಲ್ಲಿ ಅನೇಕರು ಚಿರತೆಯ ಓಡಾಟವನ್ನು ನೋಡಿ ಭಯದಿಂದ ವಾಪಸಾಗಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಅರಣ್ಯ ಸಿಬ್ಬಂದಿ ಜತೆ ಮಾತಿನ ಚಕಮಕಿ ನಡೆಸಿದರು. ನಂತರ ಎಲ್ಲರನ್ನು ಸಮಾಧಾನ ಪಡಿಸಿದ ಅರಣ್ಯಾಧಿಕಾರಿಗಳು ಗ್ರಾಮಸ್ಥರ ಮನವೊಲಿಸಿ ಚಿರತೆಯನ್ನು ಬೇರೆಡೆ ಬಿಡುವುದಾಗಿ ಭರವಸೆ ನೀಡಿದ ಮೇಲೆ ಗ್ರಾಮಸ್ಥರು ಬೋನು ಸ್ಥಳಾಂತರಿಸಲು ಅವಕಾಶ ಮಾಡಿಕೊಟ್ಟರು.

ಅರಣ್ಯ ಸಿಬ್ಬಂದಿಗೆ ತರಾಟೆ:  ಸಮೀಪದ ಸಿದ್ದರಮಟ್ಟಿ ಸೇರಿದಂತೆ ಗವಿಸಿದ್ದೇಶ್ವರ ದೇವಸ್ಥಾನದ ಗುಡ್ಡಗಾಡಿನಲ್ಲಿ ಇನ್ನೂ 3-4 ಚಿರತೆಗಳ ಓಡಾಡುತ್ತಿವೆ. ಕಳೆದೆರಡು ದಿನಗಳ ಹಿಂದೆ ಕೆಲ ಗ್ರಾಮಸ್ಥರು ದೊಡ್ಡ ಚಿರತೆಯೊಂದನ್ನು ನೋಡಿ ಭಯಬೀತರಾಗಿದ್ದಾರೆ. ಚಿರತೆ ಸಿಕ್ಕಾಗ ಓಡಿ ಬರುವ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯ ಹಾವಳಿಯ ಬಗ್ಗೆ ದೂರು ನೀಡದರೆ ಗಮನಕ್ಕೆ ತೆಗೆದುಕೊಳ್ಳುವುದಿಲ್ಲ. ಈ ಭಾಗದಲ್ಲಿ ಚಿರತೆ ಸಂತತಿ ಹೆಚ್ಚಾಗಲು ಅರಣ್ಯ ಇಲಾಖೆಯವರೆ ಕಾರಣ. ಅರಣ್ಯದಲ್ಲಿ ಭೂ ಸಾಗುವಳಿ ಮಾಡುವವರನ್ನು ಒಕ್ಕಲೆಬಿಸಿ ಸ್ಥಳೀಯರಲ್ಲಿ ಭಯ ಮೂಡಿಸುವ ಉದ್ದೇಶದಿಂದ ಬೇರೆಡೆ ಸೆರೆಯಾದ ಚಿರತೆ ಹಾಗೂ ಕರಡಿಗಳನ್ನು ಈ ಭಾಗದಲ್ಲಿ ತಂದು ಬಿಟ್ಟು ಜನತೆಯಲ್ಲಿ ಭಯದ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ. ಸೆರೆಸಿಕ್ಕ ಚಿರತೆಯನ್ನು ತಡರಾತ್ರಿ ಬಂದು ಮತ್ತೆ ಇಲ್ಲೆ ಬಿಟ್ಟು ಹೋಗುತ್ತಾರೆ ಎಂದು ಕೆಲವರು ಸ್ಥಳಕ್ಕೆ ಬಂದ ಅರಣ್ಯ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.