ಜಿಲ್ಲೆ

ಕ್ಯಾತಘಟ್ಟ ಗ್ರಾಪಂ ಅಧ್ಯಕ್ಷ ತೊರೆಚಾಕನಹಳ್ಳಿ ಪ್ರಕಾಶ್

ಕೆ.ಎಂ.ದೊಡ್ಡಿ: ಕ್ಯಾತಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ತೊರೆಚಾಕನಹಳ್ಳಿ ಪ್ರಕಾಶ್, ಉಪಾಧ್ಯಕ್ಷೆಯಾಗಿ ಶೈಲಜಾ ಅವಿರೋಧ ಆಯ್ಕೆಯಾದರು.

ಈ ಹಿಂದೆ ಅಧ್ಯಕ್ಷರಾಗಿದ್ದ ಸಿದ್ದರಾಜು, ಉಪಾಧ್ಯಕ್ಷೆ ಕೆ.ಎಂ. ಜೀವಿತಾ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ತೊರೆಚಾಕನಹಳ್ಳಿ ಪ್ರಕಾಶ್, ಉಪಾಧ್ಯಕ್ಷ ಸ್ಥಾನಕ್ಕೆ ಶೈಲಜಾ ಹೊರತು ಪಡಿಸಿ ಯಾರೂ ನಾಮಪತ್ರ ಸಲ್ಲಿಸದ ಕಾರಣ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಪಶುಸಂಗೋಪನ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಗೋವಿಂದ ಘೋಷಿಸಿದರು.

ಗ್ರಾಪಂನಲ್ಲಿ ಒಟ್ಟು 15 ಸದಸ್ಯರ ಬಲ ಹೊಂದಿದ್ದು, ಇಬ್ಬರು ಸದಸ್ಯರು ಗೈರು ಹಾಜರಾಗಿದ್ದು ಉಳಿದ 13 ಸದಸ್ಯರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.

ತೊರೆಚಾಕನಹಳ್ಳಿ ಪ್ರಕಾಶ್ ಮಾತನಾಡಿ, ನನ್ನ ಮೇಲೆ ವಿಶ್ವಾಸವಿಟ್ಟು ಅಧ್ಯಕ್ಷರನ್ನಾಗಿ ಮಾಡಿರುವ ಮಾಜಿ ಸಚಿವ ಡಿ.ಸಿ. ತಮ್ಮಣ್ಣ ಅವರ ಮಾರ್ಗದರ್ಶನದಲ್ಲಿ ಪಂಚಾಯಿತಿಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗೆ ಪಂಚಾಯಿತಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶಕ್ತಿಮೀರಿ ಶ್ರಮಿಸಿ ಮೂಲ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ತಿಳಿಸಿದರು.

ನೂತನ ಅಧ್ಯಕ್ಷ ತೊರೆಚಾಕನಹಳ್ಳಿ ಪ್ರಕಾಶ್, ಉಪಾಧ್ಯಕ್ಷೆಯಾಗಿ ಶೈಲಜಾ ಅವರನ್ನು ಗ್ರಾಪಂ ಆಡಳಿತ ಮಂಡಳಿ ಅಭಿನಂದಿಸಿತು.

ಪಿಡಿಒ ನಾಗೇಶ್, ಗ್ರಾಪಂ ಮಾಜಿ ಅಧ್ಯಕ್ಷರಾದ ರಾಜೇಶ್, ಸಿದ್ದರಾಜು, ಸಿದ್ದಲಕ್ಷ್ಮಮ್ಮ, ಮಹಾಲಕ್ಷ್ಮೀ, ಸದಸ್ಯರಾದ ಕೆ.ಎಂ. ಜೀವಿತಾ, ನಿರುಷಾ, ವೆಂಕಟೇಶ್, ಚನ್ನಾಜಮ್ಮ, ಜ್ಯೋತಿ, ಲಕ್ಷ್ಮೀ, ಮುಖಂಡರಾದ ತಿಮ್ಮರಾಜು, ಕ್ಯಾತಘಟ್ಟ ಗಿರೀಶ್, ಕೆ.ರವಿಕುಮಾರ್, ಚನ್ನೇಗೌಡ, ಪಿಣ್ಣಯ್ಯ ಮತ್ತಿತರರಿದ್ದರು.