ಜಿಲ್ಲೆ

ಕ್ಯಾಂಪಸ್ ಸೆಲೆಕ್ಷನ್ ಎನ್‌ಐಇ ಹೆಗ್ಗಳಿಕೆ

ಮೈಸೂರು: ದಿ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಇಂಜಿನಿಯರಿಂಗ್(ಎನ್‌ಐಇ) ಕಾಲೇಜು ನಗರದ ಅಗ್ರ ತಾಂತ್ರಿಕ ಶಿಕ್ಷಣ ಕಾಲೇಜುಗಳಲ್ಲಿ ಒಂದಾಗಿದೆ. ‘ಕ್ಯಾಂಪಸ್ ಸೆಲೆಕ್ಷನ್’ಗೆ ಈ ಕಾಲೇಜು ಹೆಸರುವಾಸಿಯಾಗಿದೆ.
946ರಲ್ಲಿ ಸ್ಥಾಪಿತವಾದ ಎನ್‌ಐಇ ಕಾಲೇಜು ಅನುದಾನಿತ ಸಂಸ್ಥೆಯಾಗಿದೆ. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಘೋಷಿಸಿದ ರಾಷ್ಟ್ರೀಯ ಸಂಸ್ಥೆ ಶ್ರೇಯಾಂಕ ಚೌಕಟ್ಟಿನ ಪ್ರಕಾರ ಐಐಟಿ ಗಳು ಮತ್ತು ಎನ್‌ಐಟಿ ಒಳಗೊಂಡಿರುವ ದೇಶದ ಉನ್ನತ ಇಂಜಿನಿಯರಿಂಗ್ ಕಾಲೇಜುಗಳಲ್ಲಿ 196ನೇ ಸ್ಥಾನದಲ್ಲಿದೆ .ಭಾರತದ ಉನ್ನತ ಇಂಜಿನಿಯರಿಂಗ್ ಕಾಲೇಜುಗಳಲ್ಲಿ 13ನೇ ಸ್ಥಾನದಲ್ಲಿದೆ.
ಸಂಸ್ಥೆಯು 2007ರಲ್ಲಿ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಎನ್‌ಐಇ ಸ್ವಾಯತ್ತ ಸ್ಥಾನಮಾನವನ್ನು ಪಡೆದುಕೊಂಡಿದೆ. ಇದು ನ್ಯಾಕ್‌ನಿಂದ ಮಾನ್ಯತೆ ಪಡೆದಿದೆ. ಇಲ್ಲಿ ಬಿ.ಟೆಕ್‌ನಲ್ಲಿ 8 ಮತ್ತು ಎಂ.ಟೆಕ್‌ನಲ್ಲಿ 12 ಕೋರ್ಸ್‌ಗಳ ಅಧ್ಯಯನಕ್ಕೆ ಅವಕಾಶವಿದೆ. ಬಿಇ ವಿಭಾಗದಲ್ಲಿ ಸಿವಿಲ್ ಇಂಜಿನಿಯರಿಂಗ್, ಮೆಕ್ಯಾನಿಕಲ್ ಇಂಜಿನಿಯರಿಂಗ್, ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್, ಇನ್ಫರ್‌ಮೇಷನ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್ ಅಧ್ಯಯನಕ್ಕೆ ಅವಕಾಶವಿದೆ. ಜತೆಗೆ ಪದವಿ ವಿಭಾಗದಲ್ಲಿ ಬಿ.ಸಿಎ, ಬಿ.ಕಾಂ, ಬಿಬಿಎ, ಬಿ.ಎಸ್‌ಸಿ ಕೋರ್ಸ್‌ಗಳ ಅಧ್ಯಯನಕ್ಕೂ ಅವಕಾಶ ಇದೆ.
ಪ್ರಸ್ತುತ ಕಾಲೇಜಿನಲ್ಲಿ 4500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದು, 300ಕ್ಕೂ ಹೆಚ್ಚು ಬೋಧಕ ಸಿಬ್ಬಂದಿ ಸೇವೆ ಸಲ್ಲಿಸುತ್ತಿದೆ. ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಹಾಗೂ ಮೆಕ್ಯಾನಿಕಲ್ ಇಂಜಿನಿಯರಿಂಗ್‌ಗೆ ತುಂಬಾ ಬೇಡಿಕೆ ಇದ್ದು, ಪ್ರತಿ ವರ್ಷ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಾರೆ.
‘ಸಂಸ್ಥೆಯಲ್ಲಿ ಪ್ರತಿ ವರ್ಷ ಕ್ಯಾಂಪಸ್ ಸಂದರ್ಶನ ಆಯೋಜಿಸಲಾಗುತ್ತದೆ. 300ಕ್ಕೂ ಹೆಚ್ಚು ಕಂಪನಿಗಳು ಪಾಲ್ಗೊಳ್ಳುತ್ತವೆ ಸಂದರ್ಶನದಲ್ಲಿ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಆರಂಭದಲ್ಲೇ ವಾರ್ಷಿಕ 11 ಲಕ್ಷ ರೂ. ಪ್ಯಾಕೇಜ್ ಸಿಗಲಿದೆ. ಇದು ಎನ್‌ಐಇ ಕಾಲೇಜಿನ ಹೆಗ್ಗಳಿಕೆಯಾಗಿದೆ’ ಎನ್ನುತ್ತಾರೆ ಸಂಸ್ಥೆಯ ಉದ್ಯೋಗ ಮತ್ತು ತರಬೇತಿ ಮುಖ್ಯಸ್ಥ ಹರ್ಷಿತ್ ದಿವಾಕರ್.