ಆಳಂದ: ಪಟ್ಟಣದ ಶ್ರೀರಾಮ ಮಾರ್ಕೆಟ್‌ನಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸಬಾರದು ಎಂಬ ತಕರಾರು ಜತೆಗೆ ಪುರಸಭೆ ಅಧಿಕಾರಿಗಳು ಹಾಗೂ ಸದಸ್ಯರೊಂದಿಗೆ ಜೆಡಿಎಸ್ ನಾಯಕಿ ಮಹೇಶ್ವರಿ ವಾಲಿ ಸೋಮವಾರ ವಾಗ್ವಾದ ನಡೆಸಿದ್ದಾರೆ.
ಮುಖ್ಯಮಂತ್ರಿ ಸಲಹೆಗಾರ ಬಿ.ಆರ್. ಪಾಟೀಲ್ ಇತ್ತೀಚೆಗಷ್ಟೇ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ದರು. ಸರ್ಕಾರದ ಆದೇಶದಂತೆ ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಪನಶೆಟ್ಟಿ ಹಾಗೂ ಸಿಬ್ಬಂದಿ ಸೋಮವಾರ ಕ್ಯಾಂಟೀನ್ ನಿರ್ಮಾಣದ ಸ್ಥಳ ಪರಿಶೀಲನೆ ಹಾಗೂ ಅಳತೆ ಮಾಡುತ್ತಿದ್ದರು. ಈ ವೇಳೆ ಬಂದ ಮಹೇಶ್ವರಿ ವಾಲಿ, ಇಲ್ಲಿ ಸಾಕಷ್ಟು ವ್ಯಾಪಾರಿಗಳು ಸಾಲ ಮಾಡಿ ತರಕಾರಿ ಮಾರುತ್ತಿದ್ದಾರೆ. ಕ್ಯಾಂಟೀನ್ ನಿರ್ಮಾಣದಿಂದ ಅವರೆಲ್ಲ ಎಲ್ಲಿಗೆ ಹೋಗಬೇಕು ಎಂದು ರೇಗಾಡಿದರು.
ವಾರ್ಡ್ 17ರ ಸದಸ್ಯ ಚಂದ್ರಕಾAತ ಹತ್ತರಕಿ ಮಧ್ಯಪ್ರವೇಶಿಸಿ, ಬಡ ಕೂಲಿ ಕಾರ್ಮಿಕರಿಗೆ ಅನುಕೂಲವಾಗಲೆಂದೇ ಕ್ಯಾಂಟೀನ್ ನಿರ್ಮಿಸಲಾಗುತ್ತಿದೆ. ನಿಮಗೇನು ತೊಂದರೆ? ಯಾಕೆ ಅಡ್ಡಿಪಡಿಸುತ್ತಿದ್ದೀರಿ ಎಂದು ಪ್ರಶ್ನಿಸಿದರು. ನೀವೇನೆ ಹೇಳಿದರೂ ಇಲ್ಲಿ ಕ್ಯಾಂಟೀನ್ ಮಾಡಲು ಬಿಡುವುದಿಲ್ಲ ಎಂದು ವಾಲಿ ಪಟ್ಟು ಹಿಡಿದಾಗ ಇಬ್ಬರ ಮಧ್ಯೆ ತುತು ಮೈಮೈ ನಡೆಯಿತು. ಪರಿಸ್ಥಿತಿ ಕೈಕೈ ಮಿಲಾಯಿಸುವ ಹಂತಕ್ಕೂ ತಲುಪಿತು.
ಮುಖ್ಯಾಧಿಕಾರಿ ಸಂಗಮೇಶ ಪನಶೆಟ್ಟಿ ಮಾತನಾಡಿ, ನಿಮ್ಮ ಸಮಸ್ಯೆ ಅಥವಾ ಬೇಡಿಕೆ ಏನೇ ಇದ್ದರೂ ಪುರಸಭೆ ಕಚೇರಿಗೆ ಭೇಟಿ ನೀಡಿ ಮನವಿ ಸಲ್ಲಿಸಬೇಕು. ಅದನ್ನು ಬಿಟ್ಟು ರಸ್ತೆಯಲ್ಲಿ ತಕರಾರು ತೆಗೆಯುವುದು ಸರಿಯಲ್ಲ ಎಂದು ಹೇಳಿದರು. ಇಷ್ಟಾದರೂ ಹಿಂಜರಿಯದ ಮಹೇಶ್ವರಿ ವಾಲಿ ಸ್ಥಳದಲ್ಲೇ ಕುಳಿತು ಪ್ರತಿಭಟನೆ ಆರಂಭಿಸಿದರು. ಇವರಿಗೆ ವ್ಯಾಪಾರಿಗಳು ಸಾಥ್ ನೀಡಿದರು. ಬಳಿಕ ಪಿಎಸ್‌ಐ ಭೀಮಣ್ಣ ಬಂಕ್ಲಿ ಮತ್ತು ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ವಾತಾವರಣ ತಿಳಿಗೊಳಿಸಿದರು.