ಜಿಲ್ಲೆ

ಕೌಶಲಾಭಿವೃದ್ಧಿಗೆ ಹೂಡಿಕೆ ಮಾಡಿ, ಉದ್ಯಮಿಗಳಿಗೆ ಸಚಿವ ಎಂಟಿಬಿ ನಾಗರಾಜ್ ಕರೆ ಸೋಂಪುರದಲ್ಲಿ ಸ್ಕಿಲ್ ಡೆವಲಪ್‌ಮೆಂಟ್ ಕಟ್ಟಡಕ್ಕೆ ಶಂಕುಸ್ಥಾಪನೆ

ದಾಬಸ್‌ಪೇಟೆ: ಕೌಶಾಲಾಭಿವೃದ್ಧಿಗೆ ಹೂಡಿಕೆ ಮಾಡುವುದು ಉದ್ಯಮಗಳಿಗೆ ಎಷ್ಟು ಲಾಭದಾಯಕವೋ ಹಾಗೆಯೇ ಅದು ಉದ್ಯೋಗಿಗಳಿಗೂ ಪ್ರಯೋಜನಕಾರಿ. ಹಾಗಾಗಿ ಉದ್ಯಮಿಗಳು ಕೌಶಲಾಭಿವೃದ್ಧಿ ಕ್ಷೇತ್ರದಲ್ಲಿ ಹೆಚ್ಚು ಹೂಡಿಕೆಗೆ ಆದ್ಯತೆ ನೀಡಬೇಕು ಎಂದು ಪೌರಾಡಳಿತ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಎಂಟಿಬಿ ನಾಗರಾಜು ಕರೆ ನೀಡಿದರು.

ಸೋಂಪುರ ಕೈಗಾರಿಕಾ ಪ್ರದೇಶದಲ್ಲಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ-ಎ್ ಕೆಸಿಸಿಐ ನಿರ್ಮಿಸಲು ಉದ್ದೇಶಿಸಿರುವ ’ಸೆಂಟರ್ ಆ್ ಎಕ್ಸಲೆನ್ಸ್ ಫಾರ್ ಸ್ಕಿಲ್ ಡೆವಲಪ್‌ಮೆಂಟ್ ಕಟ್ಟಡಕ್ಕೆ ಸೋಮವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಉದ್ಯೋಗಿಗಳು ಕೌಶಲ ಮತ್ತು ಜ್ಞಾನ ಹೊಂದಿರಬೇಕು. ಇದರಿಂದ ಮಾತ್ರ ಇತರ ಸ್ಪರ್ಧಿಗಳಿಗಿಂತ ಮುಂದಿರಲು ಸಾಧ್ಯ. ಕೌಶಲಾಭಿವೃದ್ಧಿಯು ಜನರನ್ನು ಸಬಲೀಕರಣಗೊಳಿಸಲು, ಅವರ ಭವಿಷ್ಯ ರೂಪಿಸಲು ಮತ್ತು ವ್ಯಕ್ತಿಯ ಒಟ್ಟಾರೆ ಅಭಿವೃದ್ಧಿಗೆ ಪ್ರಮುಖ ಸಾಧನವಾಗಿದೆ ಎಂದು ಅಭಿಪ್ರಾಯಪಟ್ಟರು.

ರಾಜ್ಯ ಸರ್ಕಾರ ಕೌಶಲ ತರಬೇತಿ ಕೇಂದ್ರದ ನಿರ್ಮಾಣಕ್ಕೆ ಅಗತ್ಯವಾದ ಎಲ್ಲ ನೆರವನ್ನೂ ನೀಡಲಿದೆ. ಇದು ವಿಶ್ವ ದರ್ಜೆಯ ಅತ್ಯುನ್ನತ ಆಧುನಿಕ ಕೇಂದ್ರವಾಗಲಿದ್ದು, ಬೇಗ ಕಟ್ಟಡ ನಿರ್ಮಾಣ ಪೂರ್ಣಗೊಂಡು ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವಂತಾಗಲಿ ಎಂದು ಆಶಿಸಿದರು.

ರಾಜ್ಯ ಹಾಗೂ ಕೇಂದ್ರ ಸರ್ಕಾರದ ನೆರವಿನಿಂದ 20 ಕೋಟಿ ರೂ.ವೆಚ್ಚದಲ್ಲಿ ಕೇಂದ್ರ ನಿರ್ಮಾಣವಾಗುತ್ತಿದೆ ಎಂದು ಮಾಹಿತಿ ನೀಡಿದರು.

ರೈತರ ಮಕ್ಕಳಿಗೆ ಉದ್ಯೋಗ ನೀಡಿ: ರೈತರ ಭೂಮಿ ಸ್ವಾಧೀನ ಮಾಡಿಕೊಂಡು ಕಾರ್ಖಾನೆ ನಿರ್ಮಾಣವಾಗಿವೆ. ಆದ್ದರಿಂದ ರೈತ ಕುಟುಂಬಗಳಿಗೆ ಕಂಪನಿಗಳಲ್ಲಿ ಉದ್ಯೋಗ ದೊರಕಿಸಿಕೊಡಿ ಎಂದು ಸಚಿವರು ತಿಳಿಸಿದರು. ರೈತರ ಮಕ್ಕಳಿಗೆ ಅವರವರ ವಿದ್ಯಾರ್ಹತೆ ಆಧಾರದ ಮೇಲೆ ಸೂಕ್ತಸ್ಥಾನಮಾನ ದೊರಕಿಸಿಕೊಡುವ ಮೂಲಕ ಕಂಪನಿಗಳು ರೈತಪರವಾಗಿ ನಿಲ್ಲಬೇಕು ಎಂದರು.

ಕರೊನಾದಿಂದ ಅಭಿವೃದ್ಧಿ ಕುಂಠಿತ: ಕರೊನಾ ಕಾರಣದಿಂದ ಅಭಿವೃದ್ಧಿಯ ವೇಗಕ್ಕೆ ತೊಡಕಾಗಿದೆ, ಸರ್ಕಾರಕ್ಕೆ ಬರಬೇಕಿದ್ದ ತೆರಿಗೆ ಕಡಿಮೆಯಾಗಿದೆ, ಕರೊನಾ ನಿಯಂತ್ರಣಕ್ಕೆ ಸರ್ಕಾರಗಳು ಪ್ರಾಮಾಣಿಕವಾಗಿ ಶ್ರಮಿಸಿವೆ, ರಾಜ್ಯದಲ್ಲೇ 4 ಕೋಟಿಗೂ ಹೆಚ್ಚು ಕರೊನಾ ಲಸಿಕೆ ವಿತರಣೆಯಾಗಿದೆ, ಇದಕ್ಕಾಗಿ ಸರ್ಕಾರಗಳು ಕೋಟ್ಯಂತರ ರೂ. ವೆಚ್ಚ ಮಾಡಿದೆ, ಪ್ರತಿಪಕ್ಷಗಳು ಆರೋಪ ಮಾಡುವುದು ಸಹಜ. ಆದರೆ ವಾಸ್ತವ ಸಂಗತಿ ಜನಕ್ಕೂ ತಿಳಿದಿದೆ. ಕರೊನಾದಂಥ ರಾಷ್ಟ್ರೀಯ ವಿಪತ್ತಿನ ಸಮಯದಲ್ಲಿ ಸರ್ಕಾರಗಳು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿವೆ ಎಂದು ಸಚಿವರು ತಿಳಿಸಿದರು.

ತೆರಿಗೆ ಪಾವತಿಸಿ: 500 ಹೆಚ್ಚು ಕಂಪನಿಗಳಿದ್ದರೂ ಪಂಚಾಯಿತಿಗೆ ಸಮರ್ಪಕವಾದ ತೆರಿಗೆ ಪಾವತಿಯಾಗುತ್ತಿಲ್ಲ ಎಂದು ಸೋಂಪುರ ಗ್ರಾಪಂ ಅಧ್ಯಕ್ಷ ಪಂಚಾಕ್ಷರಿ ಸಚಿವರ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕಂಪನಿಗಳು ಕಾಲಕಾಲಕ್ಕೆ ಸರಿಯಾಗಿ ತೆರಿಗೆ ಪಾವತಿಸಬೇಕು ಮೂಲಸೌಕರ್ಯಗಳನ್ನು ಪಡೆದು ತೆರಿಗೆ ವಂಚಿಸಬಾರದು ಎಂದರು.