ಜಿಲ್ಲೆ

ಕೌಶಲ, ಸಾಮರ್ಥ್ಯ ಮೈಗೂಡಿಸಿಕೊಳ್ಳಬೇಕು: ಪ್ರಾಂಶುಪಾಲ ಮಹೇಶ್ ಸಲಹೆ

ಹಾಸನ: ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಕೌಶಲ ಮತ್ತು ಸಾಮರ್ಥ್ಯವನ್ನು ಇಂದಿನ ಯುವಕರು ಮೈಗೂಡಿಸಿಕೊಳ್ಳಬೇಕು ಎಂದು ಕೊಣನೂರಿನ ಬಿ.ಎಂ. ಶೆಟ್ಟಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಮಹೇಶ್ ಅಭಿಪ್ರಾಯಪಟ್ಟರು.
ನಗರದ ರಿಂಗ್ ರಸ್ತೆಯಲ್ಲಿರುವ ಅಕ್ಷರ ಅಕಾಡೆಮಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುತ್ತಿರುವ ಸ್ಪರ್ಧಾರ್ಥಿಗಳಿಗೆ ಹಮ್ಮಿಕೊಂಡಿದ್ದ ಉಚಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿರುವ ಅಕ್ಷರ ಅಕಾಡೆಮಿಯು ರಾಜ್ಯದ ಅತ್ಯುತ್ತಮ ಮಾರ್ಗದರ್ಶಕರನ್ನು ಕರೆದು ಹಾಸನದಲ್ಲಿ ಕಡಿಮೆ ಬೆಲೆಯಲ್ಲಿ ತರಬೇತಿಯನ್ನು ನೀಡುತ್ತಿದೆ. 100 ವಿದ್ಯಾರ್ಥಿಗಳು ಕೂತು ಓದಬಹುದಾದ ಹವಾನಿಂತ್ರಣವಿರುವ ಕೊಠಡಿಯನ್ನು ಸುಸಜ್ಜಿತವಾದ ವಾತಾವರಣದೊಂದಿಗೆ ಸಂಸ್ಥೆಯ ಮುಖ್ಯಸ್ಥ ಗಂಗಾಧರ್ ಅವರು ನಿರ್ಮಿಸಿ ಕೊಟ್ಟಿದ್ದಾರೆ. ಇದರ ಸದುಪಯೋಗವನ್ನು ಸ್ಪರ್ಧಾಳುಗಳು ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.
ಪರೀಕ್ಷೆಯಲ್ಲಿ ಪ್ರಶ್ನೆಗಳು ಹೇಗೆ ಬರುತ್ತವೆ, ಅದಕ್ಕೆ ಉತ್ತರವನ್ನು ಹೇಗೆ ಕಂಡು ಹಿಡಿದುಕೊಳ್ಳಬೇಕು, ಹೇಗೆ ಓದಬೇಕು, ಎಷ್ಟು ಓದಬೇಕು ಮತ್ತು ಯಾವುದನ್ನು ಓದಬಾರದು ಎಂಬುವುದನ್ನು ಅರಿಯಲು ತರಬೇತಿ ಅವಶ್ಯಕವಾಗಿದೆ. ಇದರೊಟ್ಟಿಗೆ ದಿನನಿತ್ಯ ನಡೆಯುವ ವಿದ್ಯಮಾನಗಳೊಂದಿಗೆ ದೇಶ ವಿದೇಶಗಳಲ್ಲಿ ನಡೆದ, ನಡೆಯುವ ಪ್ರಮುಖ ಘಟನಾವಳಿಗಳನ್ನು ತಿಳಿದುಕೊಳ್ಳುವ ಹಾಗೂ ಸಮಾಜದಲ್ಲಿ ಪ್ರತಿನಿತ್ಯ ನಡೆಯುತ್ತಿರುವ ಪ್ರಚಲಿತ ವಿದ್ಯಮಾನಗಳ ಬಗ್ಗೆ ಅರಿವು ಮೂಡಿಸಿಕೊಂಡಿರಬೇಕು. ಕೇವಲ ಒಂದು ವಿಷಯಕ್ಕೆ ಸೀಮಿತವಾದರೆ ಮಾತ್ರ ಸಾಲದು. ಬದಲಾಗಿ ಪರೀಕ್ಷೆಗೆ ಪೂರಕವಾಗಿ ಬೇಕಾಗುವ ಎಲ್ಲಾ ಕ್ಷೇತ್ರದ ಪುಸ್ತಕಗಳನ್ನು ಓದಿ ವಿಷಯಗಳನ್ನು ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಪಡುವಲಹಿಪ್ಪೆ ಎಚ್.ಡಿ. ದೇವೇಗೌಡ ಸರ್ಕಾರಿ ಪ್ರಥಮದರ್ಜೆ ಕಾಲೇಜು ಪ್ರಾಧ್ಯಾಪಕ ಡಾ. ಶಿವಕುಮಾರ್ ಮಾತನಾಡಿ, ನಾವು ಓದುವ ಸಂದರ್ಭದಲ್ಲಿ ಈ ತರದ ಅಕಾಡೆಮಿಗಳು ಇರಲಿಲ್ಲ. ಇಂದಿನ ಯುವಕರು ಪುಣ್ಯವಂತರು. ಸಾಮಾಜಿಕ ಜಾಲತಾಣಗಳಿಂದ ದೂರಾಗಿ ತಪಸ್ವಿಗಳ ರೀತಿ ಓದಿದರೆ ಯಶಸ್ಸು ಖಂಡಿತ ಸಿಗುತ್ತದೆ ಎಂದು ತಿಳಿಸಿದರು.
ಅಕ್ಷರ ಅಕಾಡೆಮಿಯ ಸಂಸ್ಥಾಪಕ ಬಿ.ಕೆ. ಗಂಗಾಧರ್ ಮಾತನಾಡಿ, ರಾಜ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಹೆಚ್ಚು ಅಧ್ಯಯನ ಮಾಡಿದರೆ ಮಾತ್ರ ಸ್ಪರ್ಧೆಯಲ್ಲಿ ಗೆಲ್ಲಬಹುದು. ಜಿಲ್ಲಾ ಮಟ್ಟದಲ್ಲಿ ಅಕ್ಷರ ಅಕಾಡೆಮಿಯಂತಹ ತರಬೇತಿ ಸಂಸ್ಥೆಗಳನ್ನು ನಡೆಸುವುದು ಕ್ಲಿಷ್ಟವಾಗಿದ್ದರೂ ಯುವಕರಿಗೆ ಸಹಾಯ ಮಾಡುವ ಸಲುವಾಗಿ ಅಕಾಡೆಮಿಯ ಮೂಲಕ ಯುವಕರಿಗೆ ಉತ್ತಮವಾದ ತರಬೇತಿ ನೀಡುವ ಪ್ರಯತ್ನ ಮಾಡಲಾಗುತ್ತಿದೆ. ಯುವಕರು ತರಬೇತಿ ಸಂಸ್ಥೆಯ ಸೌಲಭ್ಯಗಳನ್ನು ಬಳಸಿಕೊಂಡು ತಮ್ಮ ಗುರಿ ಸಾಧಿಸಿಕೊಳ್ಳಬೇಕು. ಪರೀಕ್ಷೆಯನ್ನು ಬರೆಯುತ್ತಿರುವ ಎಲ್ಲರೂ ಸಹ ನಿಮಗೆ ಸ್ಪರ್ಧಾಳು ಆಗುವುದಿಲ್ಲ. ಅವರು ಕೇವಲ ಆಕಾಂಕ್ಷಿಗಳಾಗಿರುತ್ತಾರೆ. ಹಾಗಾಗಿ ಧೈರ್ಯದಿಂದ ಸ್ಪರ್ಧೆಯನ್ನು ಎದುರಿಸಿ ಯಶಸ್ಸು ನಿಮ್ಮದಾಗಲಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸುಮಾರು 60ಕ್ಕೂ ಅಧಿಕ ಯುವಕರು ಭಾಗವಹಿಸಿ ತರಬೇತಿ ಸೌಲಭ್ಯ ಪಡೆದುಕೊಂಡರು. ಅಕ್ಷರ ಅಕಾಡೆಮಿಯ ನಿರ್ವಾಹಕ ಶ್ರೀನಾಥ್, ಸಂಪನ್ಮೂಲ ವ್ಯಕ್ತಿಗಳಾದ ಕಾರ್ತಿಕ್ ಹಾಗೂ ರವಿ ಹಾಜರಿದ್ದರು.