ಜಿಲ್ಲೆ

ಕೌಶಲ ಶಕ್ತಿ ಸದ್ಬಳಕೆ ಮಾಡಿಕೊಂಡರೆ ಸ್ವಾವಲಂಬಿ ಜೀವನ

ಶನಿವಾರಸಂತೆ: ಸೋಮವಾರಪೇಟೆ ತಾಲೂಕಿನ 26 ಗ್ರಾಮ ಪಂಚಾಯಿಗಳಿಗೆ ಸಂಬಂಧಪಟ್ಟ ಸಂಜೀವಿನಿ ಒಕ್ಕೂಟದ ಸ್ತ್ರೀಶಕ್ತಿ ಸಂಘದ ಸದಸ್ಯೆಯರು ಸೇರಿದಂತೆ ಪಿಯುಸಿ ಉತ್ತೀರ್ಣಗೊಂಡ ನಿರುದ್ಯೋಗಿ ಮಹಿಳೆಯರಿಗೆ ನಲ್ ಜಲ್ ಮಿತ್ರ ಯೋಜನೆಯಡಿಯಲ್ಲಿ ನೀರು ನಿರ್ವಾಹಕರ ಕೆಲಸಕ್ಕೆ ಸಂಬಂಧಿಸಿದ 17 ದಿನದ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಲಾಯಿತು.

ಸಮೀಪದ ಆಲೂರು ಸಿದ್ದಾಪುರ ಸರ್ಕಾರಿ ತರಬೇತಿ ಕೇಂದ್ರದಲ್ಲಿ ಕೌಶಲ ಅಭಿವೃದ್ಧಿ ಇಲಾಖೆ, ತಾಲೂಕು ಪಂಚಾಯಿತಿ ಇಲಾಖೆ, ಸೋಮವಾರಪೇಟೆ ತಾಲೂಕು ಸಂಜೀವಿನಿ ಒಕ್ಕೂಟ, ರಾಷ್ಟ್ರೀಯ ಜಲ ಜೀವನ್ ಮಿಷನ್ ಮತ್ತು ಆಲೂರು ಸಿದ್ದಾಪುರ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿರುವ ಕಾರ್ಯಾಗಾರಕ್ಕೆ ಸೋಮವಾರಪೇಟೆ ತಾಲೂಕು ಪಂಚಾಯಿತಿ ಸಿಇಒ ಪರಮೇಶ್ ಕುಮಾರ್ ಚಾಲನೆ ನೀಡಿದರು.

ಪರಮೇಶ್ ಕುಮಾರ್ ಮಾತನಾಡಿ, ನಿರುದ್ಯೋಗಿ ಮಹಿಳೆಯರು ಬಹು ಕೌಶಲ ಶಕ್ತಿ ಸದ್ಬಳಕೆ ಮಾಡಿಕೊಂಡರೆ ಆ ಮೂಲಕವಾಗಿ ಸ್ವಾವಲಂಬಿ ಜೀವನ ನಡೆಸಬಹುದು. ಈ ನಿಟ್ಟಿನಲ್ಲಿ ನಿರುದ್ಯೋಗಿ ಮಹಿಳೆಯರು ಬಹು ಕೌಶಲ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಸ್ವಂತ ಉದ್ಯೋಗ ಮಾಡುವ ಮೂಲಕವಾಗಿ ನಿರುದ್ಯೋಗ ಸಮಸ್ಯೆಯನ್ನು ದೂರ ಮಾಡುವಂತೆ ಸಲಹೆ ನೀಡಿದರು.

ಐಟಿಐ ಪ್ರಾಂಶುಪಾಲ ಯೋಗೇಶ್ ಕುಮಾರ್, ಕೌಶಲ ಅಭಿವೃದ್ದಿ ಇಲಾಖೆ ಅಧಿಕಾರಿ ರೇಖಾ ಗಣಪತಿ ಮಾತನಾಡಿದರು.

ಎನ್‌ಆರ್‌ಎಂಎಲ್ ಸಂಸ್ಥೆಯ ಜಗನಾಥ್, ತರಬೇತಿ ಅಧಿಕಾರಿ ಭವ್ಯಾ, ಸಂಜೀವಿನಿ ಒಕ್ಕೂಟದ ಮೇಲ್ವಿಚಾರಕಿ ಭವ್ಯಾ ಮತ್ತಿತರರು ಹಾಜರಿದ್ದರು.

ತರಬೇತಿ ಕಾರ್ಯಾಗಾರದಲ್ಲಿ ವಿವಿಧ ಕಡೆಯಿಂದ 30ಕ್ಕಿಂತ ಹೆಚ್ಚಿನ ಶಿಬಿರಾರ್ಥಿಗಳು ಪಾಲ್ಗೊಂಡಿದ್ದಾರೆ.